ಕೇಂದ್ರ ಸರಕಾರಕ್ಕೆ ಮುಸ್ಲಿಮ್ ಮಹಿಳೆಯರ ಮೇಲೆ ನಿಜವಾಗಿಯೂ ಕಾಳಜಿ ಇದೆಯೇ?


ಮುಸ್ಲಿಮ್ ವಿರೋಧಿಯೆಂದು ಗುರುತಿಸಿಕೊಂಡ ಪಕ್ಷವೊಂದು ಏಕಾಏಕಿಯಾಗಿ ಮುಸ್ಲಿಮರ ಪರವಾಗಿ, ಅದರಲ್ಲೂ ಮುಸ್ಲಿಮ್ ಮಹಿಳೆಯರ ಪರವಾಗಿ ಮಾತನಾಡಲು ಆರಂಭಿಸಿದೆ ಎಂದಾದರೆ ಕೇಂದ್ರದಲ್ಲಿರುವ ಬಿಜೆಪಿ ಸರಕಾರಕ್ಕೆ ಮುಸ್ಲಿಮರ ಬಗ್ಗೆ ಕಾಳಜಿ ಹುಟ್ಟಿಕೊಂಡಿದೆಯೇ ? ಎಂಬ ಪ್ರಶ್ನೆ ಹಾಗೆಯೇ ಹಾದು ಹೋಗುತ್ತದೆ. ಈ ಪ್ರಶ್ನೆಯ ಜಾಡು ಹಿಡಿದು ಮುಂದೆ ಸಾಗಿದರೆ ಬಿಜೆಪಿ ಮುಸ್ಲಿಮ್ ಮಹಿಳೆ ( ಮದುವೆ ಹಕ್ಕುಗಳ ರಕ್ಷಣಾ ಕಾಯಿದೆ) 2017 ನ್ನು ಲೋಕಸಭೆಯಲ್ಲಿ ಜಾರಿ ಮಾಡಿ ತಲಾಕೆ ಬಿದ್ದತ್ ಅಥವಾ ತ್ರಿಪಲ್ ತಲಾಕನ್ನು ಅಮಾನ್ಯ ಮಾಡಿ, ಯಾರು ತ್ರಿಪಲ್ ತಲಾಕನ್ನು ಕೊಡಲು ಯತ್ನಿಸುತ್ತಾರ ಅವರಿಗೆ ಜೈಲಿಗಟ್ಟುವ ನೂತನ ನಿಯಮ ರೂಪಿಸಿತು. ಇದರೊಂದಿಗೆ ತನಗೆ ಮುಸ್ಲಿಮ್ ಮಹಿಳೆಯರು ದೌರ್ಜನ್ಯಕ್ಕೊಳಗಾಗುವುದು ನೋಡಲಿಕ್ಕಾಗುವುದಿಲ್ಲ ಆ ಕಾರಣಕ್ಕಾಗಿ ಈ ಕಾನೂನು ತಂದಿದ್ದೆವೆಂಬ ಹೇಳಿಕೆಯನ್ನು ಕೂಡ ಕೇಂದ್ರ ನೀಡಿದೆ. ಹಾಗೆ ನೋಡಿದರೆ ತ್ರಿಪಲ್ ತಲಾಕ್ ನಿಷೇಧಿಸುವಂತೆ ಕೋರಿದ ಕೀರ್ತಿ ಸಲ್ಲುವುದು ಮುಸ್ಲಿಮ್ ಮಹಿಳೆಯರಿಗೆ, ಈ ಕ್ರಮದಿಂದ ಬೆಸೆತ್ತ ಕೆಲವು ಮಹಿಳೆಯರು ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಿ ತ್ರಿಪಲ್ ತಲಾಕನ್ನು ರದ್ದುಗೊಳಿಸಬೇಕೆಂಬ ಕೋರಿಕೆಯನ್ನು ಇಟ್ಟಿದ್ದರು ಆದರೆ ಅವರೆಂದು ಕೂಡ ತ್ರಿಪಲ್ ತಲಾಕ್ ನೀಡಿದ ವ್ಯಕ್ತಿಗೆ ಜೈಲಿಗಟ್ಟುವ ಬಗ್ಗೆ ತಮ್ಮ ಪ್ರಸ್ತಾಪವನ್ನಿಟ್ಟಿರಲಿಲ್ಲ. ಆದರೆ ಕೇಂದ್ರ ಸರಕಾರ ಜಾರಿಗೆ ತಂದ ಕಾನೂನಿನಲ್ಲಿ ಮುಸ್ಲಿಮ್ ಮಹಿಳೆ ಬಯಸಿದರೂ ಮತ್ತೊಮ್ಮೆ ಅದೇ ಗಂಡನೊಂದಿಗೆ ಬದುಕುವುದು ಅಸಾಧ್ಯವಾಗಿದೆ. ಯಾಕೆಂದರೆ ಜೈಲಿನಲ್ಲಿರುವ ಗಂಡನೊಂದಿಗೆ ಸೇರುದಾದರೂ ಹೇಗೆ ? ಗಂಡ ಜೈಲಿಗೆ ಹೋದ ಮೇಲೆ ಆಕೆಗೆ ಗತಿಯಾರು? ಜೀವನಾಂಶ ನೀಡಲು ಜೈಲಿನಿಂದ ಹೇಗೆ ಸಾಧ್ಯ? ಅದಕ್ಕಿಂತ ಮುಖ್ಯವಾಗಿ ಮದುವೆಯೆಂಬುದು ಸಿವಿಲ್ ವ್ಯಾಜ್ಞೆ ಅದರಲ್ಲಿ ಕ್ರಿಮಿನಲ್ ಶಿಕ್ಷೆ ವಿಧಿಸಲು ಹೇಗೆ ಸಾಧ್ಯವಾಗುತ್ತದೆ ? ಇಂತಹ ಕಾನೂನು ಸಂವಿಧಾನತ್ಮಾಕವಾಗಿ ಊರ್ಜಿತವೇ ? ಎಂಬ ಪ್ರಶ್ನೆ ಒಂದು ಕಡೆ ಮತ್ತೆ ಮತ್ತೆ ಈ ಕೇಂದ್ರ ಸರಕಾರವನ್ನು ಕಟಕಟೆಯಲ್ಲಿ ನಿಲ್ಲುಸುತ್ತಿದೆ.

ಗೋರಕ್ಷಣೆಯ ಹೆಸರಿನಲ್ಲಿ ದೇಶದ ಮುಸ್ಲಿಮ್ ಪುರುಷರ ಮೇಲೆ ನಿರಂತರ ದಾಳಿಗಳಾಗಿವೆ. ಹಲವಾರು ಮಂದಿ ಹತರಾಗಿದ್ದಾರೆ. ಕೇಂದ್ರ ಸರಕಾರಕ್ಕೆ ನಿಜವಾದ ಕಾಳಜಿ ಮುಸ್ಲಿಮರ ಮೇಲೆ ಇರುತ್ತಿದ್ದರೆ ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯದ ವಿರುದ್ದ ಯಾಕೆ ಕಾನೂನು ತರಬಾರದು? ಅದೆಷ್ಟೋ ಮುಸ್ಲಿಮ್ ಮಹಿಳೆಯರು ಕಾರಣವಿಲ್ಲದೆ ತಮ್ಮ ಗಂಡಂದಿರನ್ನು ಕಳೆದುಕೊಂಡು ವಿಧವೆಯರಾಗಿದ್ದಾರೆ. ತ್ರಿಪಲ್ ತಲಾಕ್ ಬಗ್ಗೆ ತೋರಿದ ಕನಿಷ್ಠ ಕಾಳಜಿ ಈ ವಿಚಾರದಲ್ಲಿ ಕೇಂದ್ರ ಸರಕಾರ ಯಾಕೆ ತಾಳುತ್ತಿಲ್ಲ ? ಎಂಬ ಪ್ರಶ್ನೆ ಬಿಜೆಪಿ ಸರಕಾರಕ್ಕೆ ಮುಸ್ಲಿಮರ ಬಗ್ಗೆ ಎಷ್ಟೊಂದು ಕಾಳಜಿ ಇದೆಯೆಂಬುದನ್ನು ಮತ್ತೆ ಮತ್ತೆ ಸಾಬೀತು ಪಡಿಸುತ್ತಿದೆ.

ಸುಳ್ಳಿನ ಕಂತೆಯ ಮೇಲೆ ಸಾಮ್ರಾಜ್ಯ ಕಟ್ಟಲು ಹೆಣಗಾಡುತ್ತಿರುವ ಬಿಜೆಪಿ ಸರಕಾರವು ಇನ್ನು ಮುಂದೆ ಮುಸ್ಲಿಮ್ ಮಹಿಳೆಯರು ಪುರುಷರ ಸಹಾಯವಿಲ್ಲದೆ ಸೌದಿ ಅರೇಬಿಯಾಕ್ಕೆ ಹೋಗಿ ಹಜ್ಜ್ ನಿರ್ವಹಿಸಬಹುದೆಂದು ಹಸಿ ಸುಳ್ಳನ್ನು ಪಸರಿಸಿತು. ಇನ್ನೊಂದು ದೇಶದ ನಿಯಮಗಳನ್ನು ಭಾರತಕ್ಕೆ ರೂಪಿಸಲಿ ಸಾದ್ಯವೇ ? ಎಂಬ ಕನಿಷ್ಠ ಜ್ಞಾನವಾದರೂ ಕೇಂದ್ರ ಸರಕಾರಕ್ಕೆ ಬೇಡವೇ? 45 ವರ್ಷ ದಾಟಿದ ಮಹಿಳೆಯರಿಗೆ ಪುರುಷ ಜೊತೆಗಾರರು ಬೇಡವೆಂಬ ಕಾನೂನನ್ನು ಸೌದಿ ಅರೇಬಿಯಾ ತಂದಿದೆ. ಅದರಲ್ಲಿ ಮೋದಿ ಸರಕಾರದ ಯಾವುದೇ ಕೈಯಿಲ್ಲದಿದ್ದರೂ ಬೇರೆಯವರ ಸಾಧನೆಗಳನ್ನು ತಮ್ಮದೆಂದು ತಿರುಗುವ ಸರಕಾರವೊಂದಕ್ಕೆ ಕನಿಷ್ಠ ಮುಜುಗರವು ಆಗದಿದ್ದರಲ್ಲಿ ಯಾವುದೇ ಆಶ್ವರ್ಯವೇನಿಲ್ಲ.

ಮುಸ್ಲಿಮ್ ಸಮುದಾಯದ ಬಗ್ಗೆ ಬಹಳಷ್ಟು ಕಾಳಜಿ ಇರುವಂತೆ ವರ್ತಿಸುವ ಬಿಜೆಪಿ ಅವರ ಶಿಕ್ಷಣದಲ್ಲಿ ಅವರನ್ನು ಮೇಲೆತ್ತಲು ಯಾಕೆ ಸೂಕ್ತ ಕ್ರಮ ಕೈಗೊಳ್ಳಬಾರದು. ನಿರುದ್ಯೋಗದ ಸಮಸ್ಯೆಯಲ್ಲಿ ಬಳಲುತ್ತಿರುವ ಲಕ್ಷಾಂತರ ಯುವಕರಿಗೆ ಅದು ಯಾವ ಮಟ್ಟದ ಉದ್ಯೋಗ ಕಲ್ಪಿಸುವ ಯೋಜನೆಗಳನ್ನು ಜಾರಿಗೆ ತಂದಿದೆ. ಮುಸ್ಲಿಮ್ ಸಮುದಾಯವು ಕಳೆದ ಹಲವು ವರ್ಷಗಳಿಂದ ಸಾಚಾರ್ ಸಮಿತಿಯ ವರದಿಯನ್ನು ಜಾರಿಗೆ ತರಲು ರಕ್ತ ಕಣ್ಣಿರೀಡುತ್ತಿರುವಾಗ ಅದನ್ನು ಜಾರಿ ಮಾಡಲು ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಅಡ್ಡಗಾಲು ಇಟ್ಟವರ್ಯಾರು ? ಸಮುದಾಯದಲ್ಲಿ ಬೆರಳೆಣಿಕೆಯಷ್ಟಿದ್ದ ತ್ರಿಪಲ್ ತಲಾಕ್ ( ಬೇರೆ ಸಮುದಾಯಕ್ಕೆ ಹೋಲಿಸಿದರೆ ಮುಸ್ಲಿಮ್ ಸಮುದಾಯದಲ್ಲಿ ವಿಚ್ಚೇದನ ಕಡಿಮೆ) ನ್ನು ತೋರಿಸಿ ಅದಕ್ಕೊಂದು ಕಾಯಿದೆಯ ನಾಟಕವಾಡುತ್ತಿರುವ ಬಿಜೆಪಿ ಸರಕಾರ ಯಾರನ್ನು ಓಲೈಸಲು ಹೋರಟಿದೆ ?

ಚುನಾವಣಾ ಕಣದಲ್ಲಿ ಮುಸ್ಲಿಮ್ ಸಮುದಾಯದ ಅನುಪಾತಕ್ಕೆ ಅನುಗುಣವಾಗಿ ಎಷ್ಟು ಜನರಿಗೆ ಅದು ಅವಕಾಶ ಕಲ್ಪಿಸಿದೆ. ಯಾಕೆ ರಾಜಕೀಯದಲ್ಲಿ ಆ ಸಮುದಾಯವನ್ನು ಸಬಲೀಕರಣ ಮಾಡುವ ನಿಟ್ಟಿನಲ್ಲಿ ಯೋಚಿಸುತ್ತಿಲ್ಲ. ಬಿಜೆಪಿ ನಾಯಕರ ಪ್ರತಿ ಭಾಷಣದಲ್ಲೂ ಮುಸ್ಲಿಮರ ವಿರುದ್ದ ವಿಷ ಉಗುಳುತ್ತಾ, ಹಿಂದು ಬಾಂಧವರನ್ನು ಎತ್ತಿಕಟ್ಟುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಮುಸ್ಲಿಮ್ ಮಹಿಳೆಯರ ಮೇಲೆ ನಿಜವಾಗಿಯೂ ಕಾಳಜಿ ಇದೆಯೇ? ಎಂಬ ಪ್ರಶ್ನೆಗೆ ಉತ್ತರ ಇಲ್ಲವೆಂಬುದು ಅವರ ನಡೆಯಿಂದ ಸ್ಪಷ್ಟವಾಗಿದೆ.