ಕರಾವಳಿ ಕರ್ನಾಟಕದ ಬ್ಯಾರಿ ಸಮುದಾಯದ ಉದ್ಯಮಿಗಳನ್ನು ಒಂದೇ ಸೂರಿನಡಿಯಲ್ಲಿ ಒಗ್ಗೂಡಿಸುವ ಮಹತ್ತರ ಪಾತ್ರವನ್ನು ವಹಿಸುತ್ತಿರುವ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ ಮಂಗಳೂರು) ದುಬೈನಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿತ್ತು. ಮೇ 21ರಂದು ದುಬೈಯಲ್ಲಿರುವ ಪರ್ಲ್ ಸೂಟ್ಸ್ ಹೋಟೆಲ್ ನಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಹಲವಾರು ವಿಭಿನ್ನ ವೃತ್ತಿಕ್ಷೇತ್ರಗಳನ್ನು ನಿರ್ವಹಣೆ ಮಾಡುತ್ತಿರುವ ಸುಮಾರು 70ಕ್ಕೂ ಅಧಿಕ ಅನಿವಾಸಿ ಉದ್ಯಮಿಗಳು ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು. ಮೊದಲಿಗೆ ಬಿಸಿಸಿಐ ಯುಎಇ ಚಾಪ್ಟರ್ ನ ಉಪ ನಿರ್ದೇಶಕ ಅಬ್ದುಲ್ಲಾ ಮದುಮೂಲೆ ಕುರ್ ಆನ್ ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಸಿಸಿಐನ ಕಾರ್ಯಕಾರಿ ಸಮಿತಿ ಸದಸ್ಯ ಮುಹಮ್ಮದ್ ಅಲಿ ಉಚ್ಚಿಲ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ಬಳಿಕ ಬಿಸಿಸಿಐ ಯುಎಇ ಚಾಪ್ಟರ್ ನ ಪ್ರಧಾನ ಕಾರ್ಯದರ್ಶಿಯಾಗಿರುವ ತನ್ವೀರ್ ರಝಾಕ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ಇಫ್ತಾರ್ ಸೇವನೆ ಮುಗಿದು, ಮಗ್ರಿಬ್ ನಮಾಝ್ ನ ಬಳಿಕ ಸಂಕ್ಷಿಪ್ತವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಉದ್ಯಮ ಸಿದ್ಧಾಂತಗಳು ಎಂಬ ವಿಷಯದ ಕುರಿತಾದಂತೆ ಶ್ವಾಸಕೋಶ ರಕ್ಷಣೆ ತಜ್ಞ ಅಲ್ಮಿರ್ ಸ್ಮಜ್ಲೋಕಿವ್ ಮಾಹಿತಿ ಭರಿತ ಭಾಷಣವನ್ನು ಮಾಡಿದರು. ಹಲವಾರು ಮಾಹಿತಿಗಳನ್ನು ಒಳಗೊಂಡಿದ್ದ ಅವರ ಮಾತುಗಳು ನೆರೆದಿದ್ದವರಲ್ಲಿ ಸಂತಸ ಮೂಡಿಸಿತು. ಆಗಮಿಸಿದ್ದ ಎಲ್ಲ ಗಣ್ಯರಿಗೂ ರಂಝಾನ್ ಶುಭಾಶಯಗಳೊಂದಿಗೆ ಉಡುಗೊರೆಯನ್ನೂ ನೀಡಲಾಯಿತು.

ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಯುಎಇ ಅಧ್ಯಕ್ಷರಾಗಿರುವ ಎಸ್.ಎಂ ಬಶೀರ್ ಬಿಸಿಸಿಐ ಯ ಧೇಯೋಧ್ದೇಶಗಳು ಹಾಗೂ ಯೋಜನೆಗಳ ಕುರಿತಾದಂತೆ ಮಾಹಿತಿ ನೀಡಿದರು ಹಾಗೂ ಸಮುದಾಯದ ಜನರು ಬಿಸಿಸಿಐನ ಸದಸ್ಯರಾಗುವ ಮೂಲಕ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದರು. ಕಾರ್ಯಕ್ರಮದ ಯಶಸ್ಸಿಗೆ ಅಬ್ದುಲ್ ರವೂಫ್, ಹಂಝಾ ಅಬ್ದುಲ್ ಕಾದರ್, ಅಲ್ತಾಫ್ ಖಾತಿಬ್, ನವೀದ್, ಅಲ್ತಾಫ್ ಮಡಿಕೇರಿ, ಅಲ್ತಾಫ್ ಫರಂಗಿಪೇಟೆ, ಸಿದ್ದೀಕ್ ಉಚ್ಚಿಲ ಹಾಗೂ ಇಮ್ರಾನ್ ಖಾನ್ ಸಹಕರಿಸಿದರು. ಕೊನೆಗೆ ಬಿಸಿಸಿಐ ಯುಎಇ ಉಪಾಧ್ಯಕ್ಷ ಹಿದಾಯತ್ ಅಡ್ಡೂರು ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.