ದುಬೈ; ಬೆಂಕಿಯಿಂದ ಪತ್ನಿಯನ್ನು ಬದುಕಿಸಲು ಹೋಗಿ ಸಾವು ಬದುಕಿನ ಹೋರಾಟ ನಡೆಸುತ್ತಿರುವ ಭಾರತೀಯ

0
692

ದುಬೈ: ಉಮ್​ ಅಲ್​ ಕ್ವೈನ್​ನಲ್ಲಿರುವ​ ಅಪಾರ್ಟ್​ಮೆಂಟ್​ನಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ತನ್ನ ಪತ್ನಿಯನ್ನು ರಕ್ಷಿಸಲು ಹೋಗಿ 32 ವರ್ಷದ ಭಾರತೀಯ ಗಂಭೀರವಾದ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಅನಿಲ್​ ನಿನಾನ್​ ಶೇ. 90 ರಷ್ಟು ಸುಟ್ಟ ಗಾಯಗಳಿಂದ ಜೀವಂತವಾಗಿ ಉಳಿದುಕೊಂಡಿದ್ದು, ಅಬುದಾಬಿಯಲ್ಲಿರುವ ಮಾಫ್ರಖ್​ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ಅನಿಲ್​ ಆಪ್ತ ಸಂಬಂಧಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಅನಿಲ್​ ಸ್ಥಿತಿ ತುಂಬಾ ಗಂಭೀರವಾಗಿರುವುದಾಗಿ ವೈದ್ಯರು ತಿಳಿಸಿದ್ದು, ನಾವೆಲ್ಲರೂ ಆತನಿಗಾಗಿ ಪ್ರಾರ್ಥಿಸಿಕೊಳ್ಳುತ್ತಿದ್ದೇವೆ. ಅನಿಲ್​ ಪತ್ನಿ ನೀನು ಕೂಡ ಅದೇ ಆಸ್ಪತ್ರೆಗೆ ದಾಖಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ. ಕೇವಲ 10 ರಷ್ಟು ಗಾಯಗಳಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ದಂಪತಿಗೆ 4 ವರ್ಷದ ಮಗನಿದ್ದಾನೆ ಎಂದು ಆಸ್ಪತ್ರೆಯಲ್ಲಿರುವ ಅನಿಲ್​ ಸಂಬಂಧಿ ಹೇಳಿದ್ದಾರೆ.

ಅಪಾರ್ಟ್​ಮೆಂಟ್​ ಕಾರಿಡಾರ್​ನಲ್ಲಿ ಇಡಲಾಗಿದ್ದ ವಿದ್ಯುತ್​ ಬಾಕ್ಸ್​ನಲ್ಲಿನ ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದ್ದು,ಮಂಗಳವಾರ ರಾತ್ರಿಯೇ ದಂಪತಿಯನ್ನು ಉಮ್​ ಅಲ್​ ಕ್ವೈನ್​ನಲ್ಲಿರುವ​ ಶೇಕ್​ ಖಲೀಫಾ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳವಾರ ಅಬುದಾಬಿಯಲ್ಲಿರುವ ಮಾಫ್ರಖ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಆದರೆ, ಕಾರಿಡರ್​ನಲ್ಲಿ ಇರುವಾಗ ಮೊದಲು ನೀನುಗೆ ಬೆಂಕಿ ತಗುಲಿತು. ನೋವಿನಿಂದ ಕೂಗಾಡಿದಾಗ ಆಕೆಯನ್ನು ಉಳಿಸಲು ಅನಿಲ್​ ಬೆಡ್​ ರೂಮ್​ನಿಂದ ಓಡಿ ಬಂದು ಯತ್ನಿಸಿದ, ಆದರೆ ಆತನಿಗು ಬೆಂಕಿ ತಗುಲಿತು ಎಂದು ದಂಪತಿಗಳ ಬಗ್ಗೆ ಒಂದು ವರ್ಷಕ್ಕಿಂತಲೂ ಹೆಚ್ಚು ತಿಳಿದಿರುವ ಸ್ಥಳೀಯ ನಿವಾಸಿ ವಿಕಾರ್​ ಮಾಹಿತಿ ನೀಡಿದ್ದಾರೆ (ಗಲ್ಫ್ ನ್ಯೂಸ್)

LEAVE A REPLY

Please enter your comment!
Please enter your name here