ಡಿಸ್ಕೌಂಟ್ ದರದಲ್ಲಿ ಶಿಕ್ಷಣ ಮಾರಾಟಕ್ಕಿದೆ!

344

ಲೇಖಕರು: ಯಾಸೀನ್ ಕೋಡಿಬೆಂಗ್ರೆ‌ (ಕಾನೂನು ವಿದ್ಯಾರ್ಥಿ)

ಗೆಳೆಯರೊಬ್ಬರು ಖಾಸಗಿ ಶಿಕ್ಷಣ ಸಂಸ್ಥೆಯೊಂದು ಡೊನೆಷನ್ ನ ಹೆಸರಿನಲ್ಲಿ ಹಗಲು ದರೋಡೆಗೈಯುತ್ತಿರುವ ವಿಡಿಯೊವನ್ನು ಗುಪ್ತ ಕ್ಯಾಮೆರದಲ್ಲಿ ಸೆರೆ ಹಿಡಿದು  ಕಳುಹಿಸಿದ್ದರು. ಆ ವಿಡಿಯೊದಲ್ಲಿ ಕೆ.ಜಿ ಮಟ್ಟದ ತರಗತಿಗಳ ವಿದ್ಯಾರ್ಥಿಯ ಹೆತ್ತವರಿಂದ ಐವತ್ತು ಸಾವಿರಕ್ಕೂ ಮೇಲ್ಪಟ್ಟು ವಂತಿಗೆ ಸ್ವೀಕರಿಸುದರ ಕುರಿತಾಗಿತ್ತು. ವಿಡಿಯೋದಲ್ಲಿ ವಿಶೇಷ ಏನಿದೆ ಎಂದು ನಮಗೆ ಅನಿಸಬಹುದು. ಏಕೆಂದರೆ ಇವತ್ತು ಇದೆಲ್ಲಾ ಸಾಮಾನ್ಯ ವೆಂಬುದರ ಮಟ್ಟಿಗೆ ಖಾಸಗಿ ಶಾಲೆಗಳು ಜನರನ್ನು ದೋಚುತ್ತಿವೆ. ಹಾಗೂ ಜನರು ಸ್ವತಃ ಪ್ರತಿಷ್ಥೆಯ ಹೆಸರಿನಲ್ಲಿ ದೋಚಿಸಿಕೊಳ್ಳುತ್ತಿದ್ದಾರೆ.  ಭಾರತದ ಪ್ರಸ್ತುತ ಪರಿಸ್ಥಿತಿಯಲ್ಲಿ ಖಾಸಗಿ ಶಾಲೆಗಳ ಹಾವಳಿ ಮೀತಿ ಮೀರಿದ್ದು, ಬಂಡವಾಳಶಾಹಿಗಳು ಶಿಕ್ಷಣ ಕ್ಷೇತ್ರವನ್ನು ವ್ಯಾಪರದ ಮಾರುಕಟ್ಟೆಯಾಗಿಸುವಲ್ಲಿ ಬಹುತೇಕ ಯಶಸ್ವಿಗೊಂಡಿದ್ದು, ಜನರನ್ನು ತಮ್ಮ ದಾಳಕ್ಕೆ ಸಿಲುಕಿಸಿ ತಮಗೆ ಇಷ್ಟ ಬಂದಂತೆ ಅವರನ್ನು ದೋಚುವಲ್ಲೂ ಸಫಲವಾಗಿದೆ. ಪೋಷಕರು ಮಾತ್ರ ಪ್ರತಿ ವರ್ಷ ಬೈಯುತ್ತಲೇ ತಮಗೆ ಕಟ್ಟಲು ಅಸಾಧ್ಯವಾಗಿದ್ದರೂ, ತಮ್ಮ ಮಕ್ಕಳು ಖಾಸಗಿ ಶಾಲೆಯಲ್ಲಿ ಕಲಿತರೇ ಮಾತ್ರ  ಉದ್ದಾರವಾಗುತ್ತಾರೆ ಎಂಬ ಮನಸ್ಥಿತಿ ಅವರನ್ನು ಮತ್ತೆ ಮತ್ತೆ ಫೀಸನ್ನು ಕಟ್ಟಿಸುವಲ್ಲಿ ಅನಿವಾರ್ಯಗೊಳಿಸುತ್ತಿದೆ. ಆದ್ದರಿಂದ ಇಂತಹ ಹಗಲು ದರೋಡೆಗಳ ವಿಡಿಯೊಗಳ ಅಗತ್ಯವಿಲ್ಲವೆನ್ನುವಷ್ಟರ ಮಟ್ಟಿಗೆ ರಾಜಾರೋಷವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಜನರನ್ನು ಲೂಟಿ ಮಾಡುತ್ತಿದ್ದಾರೆ. ಆದರೆ ಇದರ ಬಗ್ಗೆ ನಿಗಾ ವಹಿಸಿ ಲಗಾಮು ತೊಡಿಸಬೇಕಾದ ಸರಕಾರಗಳು ಸ್ವತಃ ಮೌನವಾಗಿದೆ. ಅದರೊಂದಿಗೆ ಆಡಳಿತ ಪಕ್ಷಕ್ಕೆ ಇದರ ಬಗ್ಗೆ ಜಾಗೃತಗೊಳಿಸಬೇಕಾದ ವಿರೋಧ ಪಕ್ಷಗಳಂತೂ ಅದರ ಬಗ್ಗೆ ಚಾಕರವೆತ್ತದೆ ಸುಮ್ಮನಾಗಿ ಬಿಟ್ಟಿದೆ. ಈ ವ್ಯವಸ್ಥೆ ಯಾಕೆ ಹೀಗೆ ಎಂದು ಅದರೊಳಗೆ ನುಸುಳಿದರೆ ಅರ್ಥವಾಗುತ್ತೆ, ಈ ದೇಶದಲ್ಲಿ so called ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳೆಂದು ಕಾರ್ಯಚರಿಸುತ್ತಿರುವ ಬಹುತೇಕ ಸಂಸ್ಥೆಗಳು ಈ ರಾಜಕಾರಣಿಗಳಿಗೆ ಸೇರಿದ್ದಾಗಿರುತ್ತದೆ. ಈ ವ್ಯವಹಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಪಾಲು ಸಮಾನ. ಇನ್ನು ಬಹುತೇಕ ಬಂಡವಾಳಶಾಹಿಗಳ ಶಿಕ್ಷಣ ಸಂಸ್ಥೆಗೆ ರಾಜಕಾರಣಿಗಳ ಹಿಂಬಾಗಿಲ ಪ್ರವೇಶ ಸಾರ್ವಜನಿಕರಿಗೆ ತಿಳಿದಿಲ್ಲವೆಂದಲ್ಲ!

2015 ರಲ್ಲಿ ಖಾಸಗಿ ಶಾಲೆಗಳ ಫೀಸ್ ಹಾವಳಿಯಿಂದ ತತ್ತರಿಸಿದ್ದ, ಪೋಷಕರು ಕರ್ನಾಟಕದ ಉಚ್ಚ ನ್ಯಾಯಾಲಯದ ಕದ ತಟ್ಟಿದ್ದರು, ಇದಕ್ಕೆ ಸ್ಪಂದಿಸಿದ್ದ ಉಚ್ಚ ನ್ಯಾಯಾಲಯ ಕಳೆದ 2016 ರ ಜೂನ್ ನಲ್ಲಿ ಕೆಲವೊಂದು ನಿರ್ದೇಶನಗಳನ್ನು ಪಾಲಿಸುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನ್ಯಾಯಮೂರ್ತಿ ಅರವಿಂದ್ ಕುಮಾರ್ ತಾಕೀತು ಮಾಡಿದ್ದರು. ಹಾಗೂ ಸರಕಾರಗಳು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆಯನ್ನು ನೀಡಿದ್ದರು. ಪ್ರತಿಯೊಂದು ಶಾಲೆಗಳಲ್ಲೂ ” NO DONATION ”  ಎಂಬ ಫಲಕವನ್ನು ಕಡ್ಡಾಯವಾಗಿ ಬರೆದು ತೂಗು ಹಾಕಬೇಕೆಂಬ ಷರತ್ತು ವಿಧಿಸಲಾಗಿತ್ತು. ಶಾಲೆಯ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಒಟ್ಟು  ಖರ್ಚಿನೊಂದಿಗೆ 30 ಶೇಕಡಾ ಕೂಡಿಸಿ, ಸಂಸ್ಥೆಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ವಿಭಾಜಿಸಿದಾಗ ಬರುವ ಮೊತ್ತವನ್ನು ಮಾತ್ರ ವಿದ್ಯಾರ್ಥಿಯೊಬ್ಬನಿಂದ ಪಡೆಯಬಹುದು ಎಂಬ ನಿರ್ದೇಶನ ನೀಡಿತ್ತು. ಆ ನಿಟ್ಟಿನಲ್ಲಿ ಸರಕಾರಗಳು ಗಮನ ಹರಿಸಬೇಕೆಂಬ ತಾಕೀತು ಮಾಡಿತ್ತು. ಹಾಗೂ ಪ್ರತಿವರ್ಷ ಜನವರಿ 15 ರ ಒಳಗಾಗಿ ಶಿಕ್ಷಣ ಸಂಸ್ಥೆಗಳು ಪಡೆಯುವ ಶುಲ್ಕದ ಬಗ್ಗೆ ಸಂಪೂರ್ಣ ವಿವರವನ್ನು ಉಪ ನಿರ್ದೇಶಕರು ( DDPI) ಯವರಿಗೆ ಸಲ್ಲಿಸಬೇಕೆಂಬ ಷರತ್ತನ್ನು ಕೂಡ ವಿಧಿಸಿದೆ. ಅಷ್ಟೆ ಅಲ್ಲದೆ ಖಾಸಗಿ ಶಾಲೆಯೊಂದು ಪಡೆಯುವ ಶುಲ್ಕದ ವಿವರಗಳನ್ನು ಜನವರಿ 15 ರ ನಂತರ ಶಾಲೆಯ ನೋಟಿಸ್ ಬೋರ್ಡ್ ನಲ್ಲಿ ತಗಲಿಸಬೇಕೆಂಬ ಆದೇಶವನ್ನು ನೀಡಿದೆ. ಹಾಗೂ ಶಿಕ್ಷಣ ಸಂಸ್ಥೆಗಳು ತಮ್ಮ ಸಂಸ್ಥೆಯನ್ನು ವಿಸ್ತರಿಸುವುದಿದ್ದರೂ ಆದರ ಬಗ್ಗೆ ಮುಂಚಿತವಾಗಿ ಅಂದರೆ ಪ್ರತಿ ವರ್ಷದ ಮಾರ್ಚ್ 30 ರ ಒಳಗೆ DDPIಯವರ ಗಮನಕ್ಕೆ ತರಬೇಕೆಂಬ ನಿಯಮವನ್ನೂ ರೂಪಿಸಿದೆ.

2017  ಸುಪ್ರೀಮ್ ಕೋರ್ಟ್ ಕೂಡ ಈ ಬಗ್ಗೆ ಆಕ್ಷೇಪ ಎತ್ತಿ, ದೆಹಲಿ ಅಭಿವೃದ್ದಿ ಪ್ರಾಧಿಕಾರ ನೀಡಿರುವ ಜಮೀನಿನಲ್ಲಿ ನಿರ್ಮಿಸಿರುವ ಖಾಸಗಿ ಸಂಸ್ಥೆಗಳು ಶಾಲಾ ವಂತಿಗೆಯನ್ನು ಎರಿಸುವ ಮುಂಚೆ ಸಂಬಂಧ ಪಟ್ಟ ಇಲಾಖೆಗಳ ಗಮನಕ್ಕೆ ತರಬೇಕೆಂದು ಆದೇಶ ನೀಡಿತ್ತು. ಆದರೆ ಈ ಆದೇಶಗಳನ್ನೆಲ್ಲಾ ಪಾಲಿಸಲಾಗುತ್ತಿದೆಯೇ? ಎಂಬುದು ಮುಖ್ಯ ಪ್ರಶ್ನೆ. ಬೇರೆಲ್ಲಾ ಸಂದರ್ಭಗಳಲ್ಲಿ ನ್ಯಾಯಾಂಗ ನಿಂದನೆಯ ಬಗ್ಗೆ ಮಾತನಾಡುವ ಮಾಧ್ಯಮಗಳು, ಇಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಹಗಲು ದರೋಡೆ ನಡೆಸುತ್ತಿರುದರ ಬಗ್ಗೆ ಚಾಕರವೆತ್ತದಿರುವುದು ಸಹಭಾಗಿತ್ವದ ಸಂಕೇತವೆಂದು ನಾವು ಭಾವಿಸಬೇಕೇ?

ಕಳೆದ ಹಲವಾರು ವರ್ಷಗಳಿಂದ ವಿವಿಧ ವಿದ್ಯಾರ್ಥಿ ಸಂಘಟನೆಗಳು, ಪೋಷಕರು, ಹೆತ್ತವರು ಬೆಂಗಳೂರು, ದೆಹಲಿ, ಕೋಲ್ಕತ್ತಾ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದರೂ ಸರಕಾರಗಳು ಕಿವುಡಗಿದೇ ಹೊರತು ಅದರ ಬಗ್ಗೆ ಸೌಜನ್ಯಕ್ಕೆ ಒಂದು ಹೇಳಿಕೆಯನ್ನು ನೀಡುವ ಪ್ರಮಯಕ್ಕೆ ಹೋಗುತ್ತಿಲ್ಲ. ಅಸೋಸಿಯೆಟೆಡ್ ಚೆಂಬರ್ಸ್ ಆಫ್ ಕಾಮರ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ 2005 ರಿಂದ 2015 ರ ವರೆಗೆ 150 ಶೇ ಹೆಚ್ಚುವರಿಯಾಗಿ ವಂತಿಗೆಯನ್ನು ಸಂಗ್ರಹಿಸುತ್ತಿದೆ. ಇದು ಒಬ್ಬನ ಆದಾಯಕ್ಕಿಂತ ಹಲವು ಪಟ್ಟು ಹೆಚ್ಚಾಗಿದೆ ಎನ್ನಬಹುದು. ವರದಿಯ ಪ್ರಕಾರ  ಮಗುವಿಗೆ 2005 ರಲ್ಲಿ 55000 ಸಾವಿರ ಡೊನೆಷನ್ ಸಂಗ್ರಹಿಸುತ್ತಿದ್ದ ಖಾಸಗಿ ಶಾಲೆಗಳು ಇಂದು 1250000 ಪಡೆಯುತ್ತಿದೆ ಎಂದರೆ ಶಿಕ್ಷಣದ ವ್ಯಾಪರ ಎಷ್ಟರ ಮಟ್ಟಿಗೆ ಹೆಚ್ಚಳವಾಗುತ್ತಿದೆ ಎಂಬುದನ್ನು ಅರಿತುಕೊಳ್ಳಬಹುದಾಗಿದೆ.

ಇಷ್ಟರ ಹೊರತಾಗಿಯೂ ಪೋಷಕರು ಮಕ್ಕಳನ್ನು ಇಂತಹ ಖಾಸಗಿ ಶಾಲೆಗಳಿಗೆ ಸೇರಿಸಲು ಕಾರಣವೇನುಎಂಬುದು ಮುಖ್ಯ ಪ್ರಶ್ನೆ. ಮುಖ್ಯವಾಗಿ ಈ ಬಗ್ಗೆ ಅವಲೋಕನ ನಡೆಸಿದಾಗ ಕಂಡು ಬರುವ ಮುಖ್ಯ ಕಾರಣವೇನೆಂದರೆ ಪೋಷಕರಲ್ಲಿ ಇಂಗ್ಲೀಷ್ ಶಿಕ್ಷಣ ವ್ಯಾಮೋಹ ಒಂದು ಕಡೆಯಾದರೆ, ಇನ್ನೊಂದು ಕಡೆಯಲ್ಲಿ ಸರಕಾರಿ ಶಾಲೆಗಳ ಬಗ್ಗೆಯಿರುವ ತಾತ್ಸರ ಮನೋಭಾವ. ಜಗತ್ತು ಜಾಗತೀಕರಣದ ಬೇಗೆಯಲ್ಲಿ ಬೇಯುತ್ತಿರುವ ಈ ಸಂದರ್ಭದಲ್ಲಿ ಜನರು ತಮ್ಮ ನೆರೆಕರೆಯವರನ್ನೆ ತಮ್ಮ ಪ್ರತಿಸ್ಪರ್ಧಿಯಾಗಿ ಸ್ವೀಕರಿಸಲು ಆರಂಭಿಸಿದ್ದಾರೆ. ಪ್ರತಿಷ್ಠೆಯ ಹೆಸರಿನಲ್ಲಿ ದುಬಾರಿ ವಂತಿಗೆಗಳನ್ನು ನೀಡಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಭಡ್ತಿಗೊಳಿಸಿ ಜಂಭದಿಂದ ತಮ್ಮನ್ನು ದೋಚಿಸಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ನಗರ ಪ್ರದೇಶಗಳಲ್ಲಿ ಮಾತ್ರವಿದ್ದ ಈ ವ್ಯಾಧಿ ಇಂದು ಗ್ರಾಮೀಣ ಪ್ರದೇಶಗಳಿಗೂ ಇದು ವ್ಯಾಪಕವಾಗಿ ತನ್ನ ಕದಂಬ ಬಾಹುಗಳನ್ನು ಚಾಚಿದೆ. ಸರಕಾರಿ ಶಾಲೆಗಳ ಬಗ್ಗೆ ಗ್ರಾಮೀಣ ಜನರೂ ಕೂಡ ನಿರಾಸಕ್ತಿ ತೋರುತ್ತಿದ್ದು, ಪ್ರತಿ ದಿನ ಬೆಳಗಾಗುತ್ತಲೇ ಖಾಸಗಿ ಶಿಕ್ಷಣ ಸಂಸ್ಥೆಗಳ ಬಸ್ಸುಗಳು ನಾ ಮುಂದು ತಾ ಮುಂದು ಎನ್ನುತ್ತಾ ದೌಡಾಯಿಸುತ್ತಿರುತ್ತದೆ.

ಕರಾವಳಿ ಕರ್ನಾಟಕವನ್ನೇ ಅವಲೋಕಿಸಿದರೆ, ಇಲ್ಲಿ ಕಷ್ಟ ಪಟ್ಟು ದುಡಿಯುವ ವರ್ಗಗಳು ಕೂಡ ಸರಕಾರಿ ಶಾಲೆಗಳನ್ನು ತಿರಸ್ಕರಿಸಿ ಖಾಸಗಿ ಶಾಲೆಗಳತ್ತ ಹೆಜ್ಜೆಯಿಡುತ್ತಿದ್ದಾರೆ. ಸರಕಾರಿ ಶಾಲೆಗಳಲ್ಲಿ ಕಲಿತರೆ ಭವಿಷ್ಯವಿಲ್ಲ ಎಂಬ ಭ್ರಮೆ ಬಹುತೇಕರನ್ನು ಖಾಸಗಿ ಶಾಲೆ ತನ್ನ ಕಪಿ ಮುಷ್ಟಿಯಲ್ಲಿ ಸೆಳೆದುಕೊಳ್ಳಲು ಸಹಕರಿಸಿದೆ. ಸರಕಾರಗಳೂ ಕೂಡ ಸರಕಾರಿ ಶಾಲೆಗಳ ಬಗ್ಗೆ ಅಸಡ್ಡೆ ಹೊಂದಿರುವುದೂ ನಿಜ. ಶಾಲೆಗಳಲ್ಲಿ ಮಕ್ಕಳಿಲ್ಲ ಎಂಬ ಕಾರಣಕ್ಕೆ ಮುಚ್ಚಲು ಮುಂದಾಗುತ್ತದೆ, ಆದರೆ ಪ್ರಮಾಣಿಕವಾಗಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ  ಉದ್ದೇಶದಿಂದ ಶಾಲೆಯ ಗುಣ ಮಟ್ಟವನ್ನು, ಮೂಲ ಸೌಕರ್ಯವನ್ನು ಉನ್ನತ ದರ್ಜೆಗೆ ಸಾಧ್ಯವಾದರೆ ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಮಟ್ಟಕ್ಕೆ ಏರಿಸುವ ಬಗ್ಗೆ ಚಿಂತಿಸುದಿಲ್ಲ. ಚಿಂತಿಸಿದರೆ ಎಲ್ಲಿ ತಮ್ಮ ಸ್ವ ಖಜಾನೆಗೆ ಏಟು ಬೀಳಬಹುದೆಂಬ ಭಯ ರಾಜಕಾರಣಿಗಳಲ್ಲಿ ಸದಾ ಇದೆ.

ಇದೆಲ್ಲಾ ಸಮಸ್ಯೆಗಳ ಹೊರತಾಗಿ ನಾವು ಕೆಲವೊಂದು ಕರ್ತವ್ಯವನ್ನು ಅವಶ್ಯವಾಗಿ ನಿಭಾಯಿಸಬೇಕಾದ ಅವಶ್ಯಕತೆ ಖಂಡಿತ ಇದೆ. ಮುಖ್ಯವಾಗಿ ಇಂಗ್ಲೀಷ್ ಶಿಕ್ಷಣದಿಂದ ಹೊರ ಬನ್ನಿ ಎಂದು ಕರೆ ನೀಡುವುದು ಪ್ರಸ್ತುತ ಅಸಾಧ್ಯದ ಮಾತು ಆದರೆ ಖಾಸಗಿ ಶಿಕ್ಷಣ ಕಾನೂನುಗಳನ್ನು ಉಲ್ಲಂಘಿಸಿ ನಡೆಸುತ್ತಿರುವ ವ್ಯಾಪಾರವನ್ನು ಬಯಲಿಗೆಳೆಯಬೇಕಾಗಿದೆ. ಶಾಲಾ ಆಡಳಿತ ಮಂಡಳಿಗಳು ಕಾನೂನನ್ನು ಪಾಲಿಸದೆ ಬೇಕಾಬಿಟ್ಟಿ ಹಣವನ್ನು ವಂತಿಗೆಯ ರೂಪದಲ್ಲಿ ದೋಚುತ್ತಿದ್ದರೆ ಅದನ್ನು ಸಂಬಂಧ ಪಟ್ಟ ಇಲಾಖೆಯ ಮುಂದೆ ತರುವಂತಹ ಪ್ರಯತ್ನ ನಡೆಸಬೇಕು. ಮತ್ತು ಎಲ್ಲಾ ಖಾಸಗಿ ಶಾಲೆಗಳಿಗೆ ಸಮಾನ ಶುಲ್ಕ ನಿಯಮ ಜಾರಿಗೆ ತರಲು ಸರಕಾರದ ಮೇಲೆ ನಾವು ಒತ್ತಾಯ ತರುವುದು ಅನಿವಾರ್ಯ. ಅದಕ್ಕಿಂತ ಹೆಚ್ಚಾಗಿ ತಮ್ಮ ತಮ್ಮ ಊರಿನಲ್ಲಿರುವ ಸರಕಾರಿ ಶಾಲೆಗಳ ಬಗ್ಗೆ ಗಮನ ಹರಿಸಿ ಅದರ ಗುಣಮಟ್ಟವನ್ನು ಹೆಚ್ಚಿಸುವ ಮತ್ತು ಅದನ್ನು ಮಾದರಿ ಶಾಲೆಯನ್ನಾಗಿಸುವ ಜವಾಬ್ದಾರಿ ನಾವು ಹೊರಬೇಕಾಗಿದೆ. ಅದರೊಂದಿಗೆ ಎಲ್ಲ ಸರಕಾರಿ ನೌಕರರ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುವ ನ್ಯಾಯಾಲಯದ ತೀರ್ಪನ್ನು ಅನುಷ್ಠಾನಕ್ಕೆ ತರಲು ಸರಕಾರದ ಮೇಲೆ ಒತ್ತಡ ಹೇರುವುದು ಅನಿವಾರ್ಯ. ಒಂದಂತು ನಾವೆಲ್ಲರೂ ಗಮನದಲ್ಲಿಡಬೇಕಾದ ಪ್ರಮುಖವಾದ ಅಂಶವೇನೆಂದರೆ, ಸರಕಾರಿ ಶಾಲೆಗಳನ್ನು ಒಂದು ವೇಳೆ ನಾವು ಕಳೆದುಕೊಂಡ ಪಕ್ಷದಲ್ಲಿ ಮುದೊಂದು ದಿನ ಜನಸಂಖ್ಯೆಯ ಅರ್ಧದಷ್ಟು ಬಡತನದಿಂದ ಬಳಲುತ್ತಿರುವ ಭಾರತದ ಜನರು ಶಿಕ್ಷಣದಿಂದ ವಂಚಿತರಾಗಬೇಕಾದಂತಹ, ಶಿಕ್ಷಣ ಪಡೆಯಲು ಖಾಸಗಿ ಸಂಸ್ಥೆಗಳಿಂದ ಮಾನವ ಹಕ್ಕುಗಳನ್ನು ಬಲಿಕೊಟ್ಟು ದೋಚಿಸಿಕೊಳ್ಳಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗಬಹುದೆಂಬುದನ್ನು ಅರಿತು ಮುಂದುವರಿಯಾಬೇಕಾಗಿದೆ.ಇನ್ನು ಬೇರೆಲ್ಲಾ ಸಂದರ್ಭದಲ್ಲಿ ಸುಪ್ರಿಮ್ ಕೋರ್ಟ್, ಹೈಕೋರ್ಟ್ ಆದೇಶದ ಬಗ್ಗೆ ಮಾತನಾಡುತ್ತಾರೆ, ದೇಶದ್ರೋಹಿಗಳೆಂದು ಚಾಕರವೆತ್ತುವ so called ದೇಶಪ್ರೇಮಿಗಳು ಸಾರಸಗಟಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸುಪ್ರೀಮ್ ಆದೇಶವನ್ನು ಉಲ್ಲಂಘಿಸುತ್ತಿದ್ದರು,  ಈ ವಿಚಾರದಲ್ಲಿ ಮೌನವೃತ ಆಚರಿಸುತ್ತಿರುವುದು ವಿಪರ್ಯಾಸ !

ಇನ್ನು ಮುಂದುವರಿದು ಕೆಲವು ಶಿಕ್ಷಣ ಸಂಸ್ಥೆ ಗಳು ಡಿಸ್ಕೌಂಟ್ ದರದಲ್ಲಿ ಶಿಕ್ಷಣ ನೀಡಲು ಮುಂದಾಗಿದೆ. ಮೌಲ್ಯವೇ ಶಿಕ್ಷಣದ ಬುನಾದಿಯಾಗಿರಬೇಕಿದ್ದ ನಮ್ಮ ಶಿಕ್ಷಣ ಸಂಸ್ಥೆಗಳು ಇಂದು ಬಂಡವಾಳಶಾಹಿಗಳ ಕೈಯಡಿ ಸಿಕ್ಕಿ ನಲುಗುತ್ತಿದೆ, ವಿದ್ಯಾರ್ಥಿಗಳ ಭವಿಷ್ಯ ಅಪಾಯದಲ್ಲಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.