ಡಾ| ಜೆರಾಲ್ಡ್ ಲೋಬೊ
ಉಡುಪಿಯ ಧರ್ಮಾಧ್ಯಕ್ಷರು

ಕ್ರಿಸ್ತ ಜಯಂತಿ ಅಥವಾ ಕ್ರಿಸ್‍ಮಸ್ ದೇವರು ಮಾನವನೆಡೆಗೆ ಇಟ್ಟ ವಿಶಿಷ್ಠ ಹೆಜ್ಜೆ. “ದೇವರು ಈ ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತನ್ನ ಏಕೈಕ ಪುತ್ರನನ್ನೇ ಈ ಜಗತ್ತಿಗೆ ಧಾರೆ ಎರೆದರು.” ದನದ ಕೊಟ್ಟಿಗೆ ಅರಮನೆಯಲ್ಲ, ಗೋದಲಿ ಮೆತ್ತನೆಯ ಸುಪ್ಪತ್ತಿಗೆಯಲ್ಲ. ದನದ ಕೊಟ್ಟಿಗೆ ಪಾಪಿ ಮಾನವನ ಬದುಕಿನ ಪರಿಸ್ಥಿತಿಯನ್ನು ವಿವರಿಸುತ್ತದೆ. ಕೆಟ್ಟತನ, ಪಾಪ, ಅನಾಚಾರಗಳಿಂದ ತುಂಬಿದ ಜನರ ಮದ್ಯೆ ಯೇಸು ಜನಿಸಿದ್ದಾರೆ ಎಂಬ ಸಂದೇಶ ದನದ ಕೊಟ್ಟಿಗೆ ನಮಗೆ ನೀಡುತ್ತದೆ. ನಮ್ಮ ದೊಡ್ಡಸ್ಥಿಕೆ, ಸ್ಥಾನಮಾನ, ಹೆಸರು, ಪದವಿಗಳಲ್ಲಿ ಅವರಿಲ,್ಲ ಬದಲಾಗಿ ದೀನತೆ, ವಿಧೇಯತೆ, ಸೇವೆ, ಕ್ಷಮೆ, ದಯೆಯಲ್ಲಿ ಅವರ ಪ್ರಸನ್ನತೆಯಿದೆ. ಇಂಥಹ ಕ್ರಿಸ್ತನ ದರ್ಶನ ಭಾಗ್ಯ ಈ ಕ್ರಿಸ್ಮಸ್ ಸಂದರ್ಭದಲ್ಲಿ ಎಲ್ಲಿ ಸಿಗಬಹುದು?

ಛತ್ರದಲ್ಲಿ ಅವರಿಗೆ ಸ್ಥಳ ಸಿಗಲಿಲ್ಲ
ರೋಮ್ ಚಕ್ರವರ್ತಿ ಅಗಸ್ಟಸ್ ತನ್ನ ಸಾಮ್ರಾಜ್ಯದ ಜನಗಣತಿಯಾಗಬೇಕೆಂದು ಆಜ್ಞೆಯನ್ನು ಹೊರಡಿಸಿದರು. ಜೋಸೆಫ್ ಹಿಂದೆ ಆಳಿದ ಬೆತ್ಲೆಹೇಮಿನ ಅರಸ ದಾವೀದನ ವಂಶಸ್ಥರಾಗಿದ್ದು ನಜರೇತಿನಿಂದ ಬೆತ್ಲೆಹೇಮಿಗೆ ತನ್ನ ಪತ್ನಿಯೊಂದಿಗೆ ಪ್ರಯಾಣ ಮಾಡಿದನು. ಅವನ ಪತ್ನಿ ಮರಿಯಾ ತುಂಬು ಗರ್ಭಿಣಿಯಾಗಿದ್ದು ದೈವೀ ಶಿಸುವಿನ ಆಗಮನವನ್ನು ನಿರೀಕ್ಷಿಸುತ್ತಿದ್ದರು. ಜೋಸೆಫನೂ ಇದೇ ಭರವಸೆಯೊಂದಿಗೆ ತಮ್ಮ ಪೂರ್ವಜರ ಪಟ್ಟಣವನ್ನು ಪ್ರವೇಶಿಸಿದನು. ದೈವೀ ಶಿಸುವಿನ ಜನನಕ್ಕೆ ಅವರು ಒಂದು ಸೂಕ್ತ ಸ್ಥಳವನ್ನು ಹುಡುಕಲಾರಂಭಿಸಿದರು. ಸೃಷ್ಟಿಕರ್ತರಿಗೆ ತಮ್ಮ ಸೃಷ್ಟಿಯಲ್ಲೇ ಒಂದು ಸ್ಥಳ ಲಭಿಸಲಾರದೇ? ಊರಿನ ಛತ್ರದಲ್ಲಿ ಸ್ಥಳ ಸಿಕ್ಕೇ ಸಿಗುತ್ತದೆಂದು ಅಲ್ಲಿಗೆ ಧಾವಿಸಿದರು. ಶ್ರೀಮಂತರಿಗೆ, ಉತ್ತಮ ಪೋಷಾಕು ಧರಿಸಿದವರಿಗೆ ಅಲ್ಲಿ ಸ್ಥಳವಿತ್ತು. ಆದರೆ ಈ ಬಡ ದಂಪತಿಗಳಿಗೆ ಛತ್ರದಲ್ಲಿ ಸ್ಥಳ ಸಿಗಲಿಲ್ಲ:. ಎಂಥಹ ವಿಪರ್ಯಾಸ! ಇಡೀ ಬೈಬಲ್ ಗ್ರಂಥದಲ್ಲಿ ಅತಿ ಸಂಕಟ ತರುವ ವಾಕ್ಯವಿದು: “ಛತ್ರದಲ್ಲಿ ಅವರಿಗೆ ಸ್ಥಳ ಸಿಗಲಿಲ್ಲ”.
ಪ್ರವಾಸಿ ಗೃಹ ರಾಜಕೀಯ ವ್ಯಕ್ತಿಗಳು ಸಭೆ ಸೇರುವ ಜಾಗ, ಜನಾಭಿಪ್ರಾಯಗಳ ಚರ್ಚೆಯ ತಾಣ, ಜಗತ್ತಿನ ಆಗುಹೋಗುಗಳನ್ನು ವಿಶ್ಷೇಷಣೆ ಮಾಡುವ ಮಂತ್ರಾಲಯ. ಲೌಕಿಕ ಯಶಸ್ಸು, ಸಂಪತ್ತಿನ ವೈಭವ, ಅಧಿಕಾರದ ಗತ್ತನ್ನು ಪ್ರದರ್ಶಿಸುವ ಸದನ ಅದಾಗಿತ್ತು. ಅಲ್ಲಿ, ಮೇಲ್ವರ್ಗದ ಜನರು ವಿಜೃಂಬಿಸುತ್ತಿದ್ದರು. ಛತ್ರದಲ್ಲಿ ಸ್ಥಳ ಸಿಗದ ದಂಪತಿಗಳಿಗೆ ಕೊಟ್ಟಿಗೆಯಲ್ಲಿ ಸ್ಥಳವಿತ್ತು. ಕೊಟ್ಟಿಗೆ ಬಹಿಷ್ಕರಿಸಲ್ಪಟ್ಟವರ, ಗಣನೆಗೆ ಬಾರದವರ, ಮೂಲೆ ಗುಂಪಾದವರ ಆಶ್ರಯ ತಾಣ. ಪವಿತ್ರ ಗ್ರಂಥದಲ್ಲಿ ಉಲ್ಲೇಕಿಸಿರುವ ಪ್ರಕಾರ, ದೇವಪುತ್ರ ಛತ್ರದಲ್ಲಾದರೂ ಜನಿಸಬಹುದು ಎಂಬುದು ಧರ್ಮಪಂಡಿತರ ಊಹೆಯಾಗಿತ್ತು. ನಾವು ನಿರೀಕ್ಷಿಸದ ಸ್ಥಳದಲ್ಲಿ ಅಪೇಕ್ಷಿಸದ ಜಾವದಲ್ಲಿ ದೈವತ್ವ, ಸಾಕ್ಷಾತ್ಕಾರಗೊಳ್ಳುತ್ತದೆ. ದೈವಪುತ್ರ ತಮ್ಮ ಲೋಕವನ್ನು ಪ್ರವೇಶಿಸಿದ್ದು ಅಪರಿಚಿತನಂತೆ, ಗಣನೆಗೆ ಬಾರದ ಸ್ಥಳದಲ್ಲಿ. ಇಲ್ಲೂ ಆ ತಾಯಿ ನವಜಾತ ಶಿಸುವನ್ನು ಚಿಂದಿ ಬಟ್ಟೆಯಲ್ಲೇ ಸುತ್ತಿ ಗೋದಲಿಯಲ್ಲಿ ಮಲಗಿಸಿದಳು.

ಪ್ರಭು ಯೇಸು ದೇವ ಸ್ವರೂಪಿಯಾಗಿದ್ದರು, ದೇವರಿಗೆ ಸರಿಸಮಾನರಾಗಿದ್ದರು, ಸದಾ ದೇವರಾಗಿದ್ದರು. ಆದರೂ ಈ ಸಮಾನ ಅಂತಸ್ತನ್ನು ಬಿಡಲಾರೆ ಎನ್ನಲಿಲ್ಲ. ಅವರು ತಮ್ಮನ್ನೇ ಬರಿದು ಮಾಡಿಕೊಂಡರು. ಬರಿದು ಮಾಡಿಕೊಳ್ಳುವುದು ಎಂದರೆ ಅಂತಸ್ತನ್ನು ಕಳೆದು ಕೊಳ್ಳುವುದು, ಶೂನ್ಯವಾಗುವುದು. ದೈವ ಅಂತಸ್ತನ್ನು ತೊರೆದು ಅವರು ದಾಸನ ರೂಪವನ್ನು ಧರಿಸಿಕೊಂಡರು, ಗುಲಾಮನಂತಾದರು. ದಾಸನ ಕೀಳು ಅವಸ್ಥೆಯನ್ನು ಅಂಗೀಕರಿಸಿದ ಅವರು ನರಮಾನವರಾಗಿ ಬೆತ್ಲೆಹೇಮಿನಲ್ಲಿ ಗೋಚರವಾದರು, ತಮ್ಮನ್ನೇ ತಗ್ಗಿಸಿಕೊಂಡರು. ಮುಂದೆ ಅವರು ಪಾಪಿ ಮಾನವನ ರಕ್ಷಣೆಗಾಗಿ ಶಿಲುಬೆಯ ಮರಣವನ್ನು ಅಪ್ಪಿಕೊಳ್ಳುವಷ್ಟು ದೀನರಾದರು. ಕ್ರಿಸ್ಮಸ್‍ನ ನಿಜ ಅರ್ಥ “ಬರಿದು ಮಾಡಿಕೊಳ್ಳುವುದರಲ್ಲಿ” ಅಡಕವಾಗಿದೆ. ವಾಸಕ್ಕೆ ಯೋಗ್ಯವಲ್ಲದ ಸ್ಥಳದಲ್ಲಿ ದೈವೀ ಶಿಸು ಜನಿಸುವಂತಾಯಿತು. ಅದರ ಅವರ ಜನನದಿಂದ ಆ ಕೊಟ್ಟಿಗೆ ಪಾವನವಾಯಿತು, ದೇವರ ಗರ್ಭಗುಡಿಯಾಯಿತು. ಅದೃಶ್ಯ ದೇವರು ಸದೃಶ್ಯರಾಗಿ ಕೊಟ್ಟಿಗೆಯಲ್ಲಿ ಮೂಕ ಪ್ರಾಣಿಗಳ ಮಧ್ಯೆ ಜನ್ಮತಳೆದರು, ದೇಹಾಂಬರರಾಗಿ ಪ್ರತ್ಯಕ್ಷರಾದರು.
ದೇವರು ಮಾನವನನ್ನು ಎಷ್ಟಾಗಿ ಪ್ರೀತಿಸಿದರೆಂದರೆ…

ಈ ದೈವೀ ಸಂಭೂತ ಮಾನವ ಶಿಸುವಾಗಿ ಹುಟ್ಟಿದುದೇಕೆ? ಮಾನವನಲ್ಲಿ ಮನೆಮಾಡಿದ ಮಲಿನತೆ, ರೋಗರುಜಿನ, ಪಾಪಾಕ್ರಮವನ್ನು ನಿರ್ಮೂಲ ಮಾಡಿ ಅವನಲ್ಲಿ ದೈವತ್ವವನ್ನು ಸ್ಥಾಪಿಸುವುದು ಆಗಿತ್ತು. ಕೊಳಕು ಕೊಟ್ಟಿಗೆಯನ್ನು ಹೋಲುವ ಮಾನವ ಹೃದಯ ಮಲಿನವಾಗಿದೆ. ಅದನ್ನು ಸ್ವಚ್ಛಗೊಳಿಸುವ ಅಗತ್ಯವಿದೆ. ಪ್ರಭುಯೇಸುವನ್ನು ಹೃದಯದಲ್ಲಿ ನಂಬಿಕೆಯಿಂದ ಸ್ವೀಕರಿಸಿದಾಗ ಪಾಪಾಂಧಕಾರ ಮಾಯವಾಗಿ ದೈವತ್ವ ನೆಲೆಯಾಗುತ್ತದೆ. ಈ ಕಾರಣ ಕ್ರಿಸ್ಮಸನ್ನು ಆಚರಿಸುವ ಎಲ್ಲರೂ ತಮ್ಮನ್ನೇ ಬರಿದುಮಾಡಿಕೊಳ್ಳಬೇಕಾಗುತ್ತದೆ.
ಬೆತ್ಲೆಹೇಮಿನ ಗುಡ್ಡಗಾಡಿನಲ್ಲಿ ತಮ್ಮ ಕುರಿ ಹಿಂಡುಗಳನ್ನು ಮೇಯಿಸುತ್ತಿದ್ದ ಕುರುಬರ ಹೃದಯ ನಿರ್ಮಲವಾಗಿತ್ತು, ಜೀವನ ಸರಳವಾಗಿತ್ತು. ಆದುದರಿಂದ ಆ ರಾತ್ರಿ ದೈವೀ ಶಿಸುವಿನ ಜನನ ಸಂದೇಶ ಅವರಿಗೆ ಮೊದಲು ಲಭಿಸಿತು. ಈ ಶುಭ ಸಮಾಚಾರದೊಂದಿಗೆ ದೇವರ ಮಕ್ಕಳ ಅಂತಸ್ತೂ ಅವರ ಪಾಲಿಗೆ ಬಂದಿತು. ಅವರಿಗೆ ದರ್ಶನ ಕೊಟ್ಟ ದೇವದೂತನು ಹೀಗೆಂದನು: “ಭಯಪಡಬೇಡಿ, ಇಗೋ ಜನರೆಲ್ಲರಿಗೂ ಪರಮಾನಂದವನ್ನು ತರುವ ಶುಭಸಂದೇಶವನ್ನು ನಿಮಗೆ ತಿಳಿಸುತೇನೆ. ಅದೇನೆಂದರೆ, ಇಂದೇ ದಾವೀದನ ಊರಿನಲ್ಲಿ ನಿಮಗೋಸ್ಕರ ಲೋಕೋದ್ಧಾರಕರು ಜನಿಸಿದ್ದಾರೆ, ಅವರೇ ಕ್ರಿಸ್ತ”. ಆನಂತರ ಗೋಚರವಾದ ದೈವದೂತ ಪರಿವಾರ “ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಅವರು ಒಲಿದ ಮಾನವರಿಗೆ ಶಾಂತಿ” ಎಂದು ಹಾಡಿತು.
ಪ್ರಭುಯೇಸು ಅರಸ ದಾವೀದನ ವಂಶವೃಕ್ಷದ ಪ್ರಕಾರ ಅರಸುತನಕ್ಕೆ ನೇರ ವಾರಸುದಾರರು. ಆದರೆ ಆ ರಾಜ್ಯ ಮತ್ತು ಸಿಂಹಾಸನ ರೋಮನರ ಸ್ವಾಧೀನದಲ್ಲಿತ್ತು. ಒಂದು ಕಾಲದಲ್ಲಿ ರಾಜ್ಯ ವೈಭವದಿಂದ ಪ್ರಖ್ಯಾತವಾಗಿದ್ದ ಈ ವಂಶ ಅವನತಿಗೆ ಒಳಪಟ್ಟಿತ್ತು. ಮರಿಯಾ ಮತ್ತು ಜೋಸೆಫರು ಬಡತನದ ಬವಣೆಯನ್ನು ಅನುಭವಿಸುತ್ತಿದ್ದರು. ಆದರೆ ಅರಸುತನವನ್ನು ವಂಶದಿಂದ ಬೇರ್ಪಡಿಸಲಾಗುವುದೆ? ತತ್ಪರಿಣಾಮವಾಗಿ ಪ್ರಭು ಯೇಸು ಬಡವರ, ನಿರ್ಗತಿಕರ ಅರಸರಾಗಿ ಕೊಟ್ಟಿಗೆಯಲ್ಲಿ ಜನಿಸಿದರು.
ಎರಡು ವರ್ಗದ ಜನರು ಈ ಶಿಸುವಿನ ಅರಸುತನವನ್ನು ಗುರುತಿಸಿ ದೈವೀ ಕೃಪೆಗೆ ಪಾತ್ರರಾದರು. ಆಸ್ತಿಪಾಸ್ತಿ, ಅಧಿಕಾರವಿಲ್ಲದ, ಲೌಕಿಕ ಜ್ಞಾನವಿಲ್ಲದ, ಸಮಾಜದಲ್ಲಿ ಸ್ಥಾನವಿಲ್ಲದ, ನಿರಕ್ಷರಿ ಕುರುಬರು. ಅವರು ತಮ್ಮಲ್ಲಿದ್ದ ಹಾಲು ಹಣ್ಣು, ಒಣ ಖರ್ಜೂರ, ಗಿಣ್ಣವನ್ನು ಶಿಸುವಿಗೆ ಪಾದ ಕಾಣಿಕೆಯನ್ನಾಗಿ ಅರ್ಪಿಸಿ ಅವರ ರಾಜ್ಯದ ಪ್ರಜೆಗಳನ್ನಾಗಿ ಗುರುತಿಸಿ ಕೊಂಡರು. ಕೆಲವು ಸಮಯದ ನಂತರ ಆಗಮಿಸಿದ ಪೂರ್ವ ದೇಶದ ಜ್ಯೋತಿಷಿಗಳು ತಮ್ಮ ಬೊಕ್ಕಸದಿಂದ ಚಿನ್ನ, ಪರಿಮಳ ದ್ರವ್ಯ ಮತ್ತು ರಸಗಂಧವನ್ನು ಕೊಟ್ಟು ಸಾಷ್ಟಾಂಗವೆರಗಿ ಕ್ರಿಸ್ತರ ರಾಜ್ಯದಲ್ಲಿ ಅರ್ಹತೆÀಯನ್ನು ಪಡೆದುಕೊಂಡರು. ಸೊಕ್ಕಿನಿಂದ ಮೆರೆಯುತ್ತಿದ್ದ ಧರ್ಮಶಾಸ್ತ್ರಜ್ಞರಿಗೆ, ಪಂಡಿತರಿಗೆ ತಾವು ಪಕ್ಕದ ಊರಿನಲ್ಲೇ ಇದ್ದರೂ ಆ ಭಾಗ್ಯ ಲಭ್ಯವಾಗಲಿಲ್ಲ. ದೈವಲೀಲೆ ಎಷ್ಟು ವಿಚಿತ್ರವಾದುದು!

13 ನೇ ಶತಮಾನದ ಆರಂಭದಲ್ಲಿ ಯೇಸುಸ್ವಾಮಿಯ ಜನನದ ಪೃತಿಕೃತಿಯಾದ ಪ್ರಥಮ ಗೋದಲಿಯನ್ನು ತಯಾರಿಸಿದ ಶಾಂತಿದೂತ ಎಂಬ ಹೆಸರಿನ ಆಸ್ಸಿಸಿಯ ಸಂತ ಫ್ರಾನ್ಸಿಸ್ ಈ ಮಾರ್ಮಿಕ ಮಾತುಗಳನ್ನಾಡಿದ್ದಾರೆ: “ನಾವು ದೇವರ ಚಿತ್ತವನ್ನು ಪಾಲಿಸಿದಾಗ ಯೇಸುಸ್ವಾಮಿಯ ಸೋದರ-ಸೋದರಿಯರಾಗುತ್ತೇವೆ; ವಿಶ್ವಾಸದಿಂದ ಅವರನ್ನು ಹೃನ್ಮನಗಳಲ್ಲಿ ಹೊತ್ತುಕೊಂಡು ನಮ್ಮ ಸನ್ನಡತೆಯಿಂದ ಸುಕೃತ್ಯಗಳಿಗೆ ಜನ್ಮವಿತ್ತಾಗ ನಾವು ಅವರ ತಾಯಂದಿರಾಗುತ್ತೇವೆ.”
ಕ್ರಿಸ್ಮಸ್ ಮಹೋತ್ಸವದ ಸಂತೋಷ, ಶಾಂತಿ-ಸಮಾಧಾನ ಎಲ್ಲರ ಮನೆ-ಮನಗಳನ್ನು ಬೆಳಗಿಸಲಿ.

 

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.