ಕೆಫೆ ಕಾಫಿ ಡೇ ಸಿದ್ಧಾರ್ಥ್ ಮತ್ತು ಮೇಕ್ ಇನ್ ಇಂಡಿಯಾದ ಮೇಲೆ ಏಳುವ ಸವಾಲುಗಳು!

1466

ಕೆಫೆ ಕಾಫಿ ಡೇಯ ಮಾಲಕ ವಿಜಿ ಸಿದ್ಧಾರ್ಥ್ ಮಂಗಳೂರಿನ ಜಪ್ಪಿಮೊಗರಿನ ನೇತ್ರಾವತಿ ಸೇತುವೆಯ ಬಳಿ ನಾಪತ್ತೆಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಕೆಫೆ ಕಾಫಿ ಡೇ ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಕಾಫಿಯನ್ನು ಬ್ರ್ಯಾಂಡಾಗಿ ಜನಪ್ರಿಯಗೊಳಿಸಿದ ಖ್ಯಾತಿಯಿದೆ.

ಮೇಕ್ ಇನ್ ಇಂಡಿಯಾ ಮುಖಾಂತರ ಭಾರತೀಯ ಉದ್ದಿಮೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಬೇಕೆಂದು ಕೇಂದ್ರ ಸರಕಾರ ಹೇಳುತ್ತ ಬರುತ್ತಿದೆಯಾದರೂ ಸಿದ್ದಾರ್ಥ್ ಬರೆದ ಪತ್ರದಲ್ಲಿ ಎದ್ದಿರುವ ಆದಾಯ ತೆರಿಗೆಯ ದಾಳಿಗಳು ಮೇಕ್ ಇನ್ ಇಂಡಿಯಾ ಯೋಜನೆಗಳನ್ನು ಬಲಿಷ್ಟವಾಗಿ ಬೆಳೆಯಲು ಬಿಡಲಿದೆಯೇ ಎಂಬ ಒಂದು ದೊಡ್ಡ ಸವಾಲು ಎದುರಾಗುತ್ತಿರುವುದು ಸುಳ್ಳಲ್ಲ!

ಸಿದ್ಧಾರ್ಥ್ 140 ವರ್ಷದಿಂದ ಕಾಫಿ ಬೆಳೆ ಬೆಳೆಯುತ್ತಿದ್ದ ಕುಟುಂಬದಿಂದ ಬಂದಿದ್ದ ಯುವಕ. ಕುಟುಂಬ ಶ್ರೀಮಂತವಾಗಿತ್ತು. ಚಿಕ್ಕಮಗಳೂರಿನಲ್ಲಿ ಸುಮಾರು 10,000 ಎಕರೆಗಿಂತ ಹೆಚ್ಚು ಈತನ ಸ್ವಂತ ಕಾಫಿ ತೋಟವಿದೆ.ತೊಂಭತ್ತರ ದಶಕದಲ್ಲಿ ಕಾಫಿ ಉದ್ದಿಮೆಯ ಉದಾರೀಕರಣದಿಂದ ದ್ವಿಗುಣ ಲಾಭ ಮಾಡಿಕೊಂಡಿದ್ದ ಸಿದ್ದಾರ್ಥ್ ಬಂದ ಹಣದ ರಾಶಿಯನ್ನು ಕಾಫಿ ಬೆಳೆ ಬೆಳೆಸಲು ಹೂಡಿದ್ದ!. ಚಿಕ್ಕಮಗಳೂರಿನಲ್ಲಿ ಬೆಳೆದ ಕಾಫಿಯನ್ನು ಬೇರೆ ದೇಶಕ್ಕೆ ರವಾನಿಸಿ ಹೆಸರುವಾಸಿಯಾದ ಸಿದ್ದಾರ್ಥ್ ಎಬಿಸಿಟಿಸಿಎಲ್ ಸಂಸ್ಥೆ ಸ್ಥಾಪಿಸಿ 20,000 ಟನ್ ಕಾಫಿ ವಹಿವಾಟು ಮಾಡಿದ. ನಂತರ ಭಾರತದ ಎರಡನೇ ಅತೀ ದೊಡ್ಡ ಕಾಫಿ ರಫ್ತು ಸಂಸ್ಥೆಯೆಂಬ ಹೆಗ್ಗಳಿಕೆ ಕೂಡ ಆತನದ್ದಾಗಿತ್ತು.

ಇಂತಹ ಸಂದರ್ಭದಲ್ಲಿ ರಿಟೈಲ್ ಕಾಫಿ ಶಾಪ್ ಆರಂಭಿಸಲು ಮುಂದಾದ ಸಿದ್ದಾರ್ಥ್ ‘ಕೆಫೆ ಕಾಫಿ ಡೆ’ ಯನ್ನು ಮೊಟ್ಟ ಮೊದಲ ಬಾರಿಗೆ 1996 ರಲ್ಲಿ ಬ್ರಿಗೇಡ್ ರಸ್ತೆಯಲ್ಲಿ ಆರಂಭಿಸಿ ಇಂಟರ್ ನೆಟ್ ಮತ್ತು ಕಾಫಿಯನ್ನು ನೂರು ರೂಪಾಯಿಗೆ ಕೊಡಲು ಆರಂಭಿಸಿದ. ಅಲ್ಲಿಂದ ಸಿಸಿಡಿ ಬೆಳೆಯುತ್ತ ಹೋಯಿತು. ಭಾರತೀಯ ಕಾಫಿ ಬ್ಯಾಂಡೊಂದನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ ಖ್ಯಾತಿ ಅವನಿಗಿದೆ. ಈಗ ಸಿಸಿಡಿಯ 1700 ಕೆಫೆಗಳು, 48,000 ವೆಂಡಿಗ್ ಮೆಶಿನ್ಗಳು, 403 ಕಾಫಿ ಬೀಜ ಮಾರುವ ಹೈಟೆಕ್ ಅಂಗಡಿಗಳು ಕೂಡ ಆತನ ಮಾಲಕತ್ವದಲ್ಲಿ ಕಾರ್ಯಚರಿಸುತ್ತಿದೆ. ವರ್ಷಕ್ಕೆ 4264 ಕೋಟಿ ವಹಿವಾಟು ನಡೆಸುವ ಕೆಫೆ ಕಾಫಿ ಡೆ ಸಂಸ್ಥೆ, 2015 ರ 8200 ಕೋಟಿ ಬೆಲೆ ಬಾಳುವ 12,000 ಎಕರೆ ಕಾಫಿ ತೋಟ ಹೊಂದಿದೆ.

ಹೀಗೆ ತನ್ನ ಸಾಮ್ರಾಜ್ಯವನ್ನು ಭಾರತದಾದ್ಯಂತ ವಿಸ್ತರಿಸಿದ್ದ ಸಿದ್ದಾರ್ಥ್ 24 ನೇ ವರ್ಷದಲ್ಲಿ ಈ ಉದ್ದಿಮೆಗೆ ಎಂಟ್ರಿ ಕೊಟ್ಟು ಬಹಳಷ್ಟು ಸಾಧಿಸಿದ್ದ, ಆದರೆ ಆತನ ಪಾಲಿಗೆ ಶನಿದೆಸೆ ಆರಂಭವಾಗಿದ್ದು 2017 ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಆದಾಯ ತೆರಿಗೆಯ ಹಿರಿಯ ಅಧಿಕಾರಿಗಳು ದೇಶದ 20 ಕಡೆಗಳಲ್ಲಿ ದಾಳಿ ನಡೆಸಿದರು. 650 ಕೋಟಿ ಅಕ್ರಮ ಆದಾಯದ ಬಗ್ಗೆ ಪ್ರಸ್ತಾಪಿಸಿದ್ದರು. ಇದೀಗ ಸಿದ್ದಾರ್ಥ್ ಬರೆದಿದ್ದಾರೆ ಎನ್ನಲಾದ ಪತ್ರದಲ್ಲೂ ಆದಾಯ ತೆರಿಗೆಯ ಬಗ್ಗೆ ಉಲ್ಲೇಖಿಸಲಾಗಿದೆ. ಇದೇ ಕಾರಣಕ್ಕೆ ಸಿದ್ಧಾರ್ಥ್ ಮಾವ ಮಾಜಿ ಮುಖ್ಯಮಂತ್ರಿ ಎಸ್.ಎಮ್ ಕೃಷ್ಣ ಆಡಳಿತ ರೂಢ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು ಎಂಬ ವದಂತಿ ಕೂಡ ಇದೆ.

ಇಲ್ಲಿರುವ ಮುಖ್ಯ ಪ್ರಶ್ನೆ ಸಿದ್ದಾರ್ಥ್ ಒರ್ವ ಪಕ್ಕ ಬಂಡವಾಳಶಾಹಿ,ಯುವ ಉದ್ಯಮಿಯಾಗಿ ದೇಶದ ಕಾಫಿ ಅನ್ನು ಜಗತ್ಪ್ರಸಿದ್ಧಗೊಳಿಸಿದರು. ಸಿಸಿಡಿ ಸ್ಥಾಪಿಸಿ ಅಂತರಾಷ್ಟ್ರೀಯ ಸಂಸ್ಥೆಗಳ ಸಮಾನಕ್ಕೆ ಸ್ಪರ್ಧಿಸುವಂತೆ ಮಾಡಿದ ಕೀರ್ತಿ ಕೂಡ ಇದೆ. ಹಾಗದರೆ ಮೇಕ್ ಇನ್ ಇಂಡಿಯಾ ಕನಸಿನಂತೆ ಯಾವುದಾದರೂ ವ್ಯಕ್ತಿಯ ಉದ್ದಿಮೆ ಇಷ್ಟೆತ್ತರಕ್ಕೆ ಬೆಳೆದು ದೇಶದ ಹೆಸರಿಗೆ ಕೀರ್ತಿ ತಂದಾಗ ಆತನ ಉದ್ದಿಮೆಯ ಆದಾಯದ ಮೇಲೆ ತೆರಿಗೆಯ ಹಾಕುವಾಗ ಆದಾಯ ಇಲಾಖೆ ತೆಗೆದುಕೊಳ್ಳುವ ಮಾನದಂಡಗಳು, ನಿಯಮಗಳು ಚರ್ಚೆಯಾಗಬೇಕು. ಒರ್ವ ಉದ್ಯಮಿ ತೆರಿಗೆ ಕಟ್ಟಿದ ಹೊರತಾಗಿಯೂ ಆತನ ಮೇಲೆ ಕಿರುಕುಳ ನಡೆಯುತ್ತಿದೆಯೇ ಎಂಬ ಬಗ್ಗೆಯೂ ನಿಗಾವಿರಬೇಕಾಗಿದೆ. ಯಾಕೆಂದರೆ ಇಡೀ ಸಮಾಜ ಉದ್ಯಮಿಯ ಬಳಿ ಹಣವಿದೆ. ಅದಕ್ಕೆ ಆತ ಹಣಕಟ್ಟಬೇಕು. ಕಟ್ಟದಿದ್ದರೆ ಆದಾಯ ತೆರಿಗೆ ಕ್ರಮ ಕೈಗೊಳ್ಳಬೇಕೆಂಬ ಸಾಮಾನ್ಯ ಹೇಳಿಕೆಗಳು ಚರ್ಚೆಯಾಗುತ್ತ ಇರುತ್ತದೆ. ಆದರೆ ಒಮ್ಮೆ ವ್ಯವಹಾರ ಕೋಟಿಯ ಗಡಿ ದಾಟಿದಾಗ ಅಧಿಕಾರಿಗಳ ಲಾಲಸೆ, ರಾಜಕೀಯದ ಒತ್ತಡ ಅಲ್ಲಗಳೆಯುವಂತಿಲ್ಲ ತಾನೇ? ಹೀಗಾದರೆ ಮೇಕ್ ಇನ್ ಇಂಡಿಯಾ ಬೆಳೆಯುದಾದರೂ ಹೇಗೆ? ಎಂಬ ಪ್ರಶ್ನೆ ಬಹಳಷ್ಟು ಅನುಮಾನವನ್ನು ಸೃಷ್ಟಿಸುತ್ತಿದೆ. ಹಾಗೆಯೇ ಒರ್ವ ಕೋಟ್ಯಾಂತರ ವ್ಯವಹಾರ ಮಾಡುತ್ತಿದ್ದ ವ್ಯಕ್ತಿ ಏಕಾಏಕಿ ನಾಪತ್ತೆಯಾಗುತ್ತನೆಂದರೆ ಕಾಣದ ಕೈಗಳು ಆಟವಾಡಿರುವುದಂತೂ ಸತ್ಯ. ಅದರ ಬಗ್ಗೆ ತನಿಖೆಯಾಗಬೇಕಿದೆ. ಗೊಂದಲಗಳಿಗೆ ತೆರೆ ಬಿಳಬೇಕಾಗಿದೆ.

ಇಂದು ಸಿದ್ದಾರ್ಥ್ ಹೆಗಡೆ ಇಲ್ಲಿನ ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡಿದ್ದಾರೆ. ಇಲ್ಲಿನ ಅರ್ಥಿಕತೆಗೆ ಕೊಡುಗೆ ನೀಡಿದ್ದಾರೆ. ಇವರ ಆಸರೆಯಲ್ಲಿ ಹಲವಾರು ಜನ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇವತ್ತು ಸಿದ್ದಾರ್ಥ್ ಅವರು ಇಂತಹ ಭಯಾನಕ ನಿರ್ಧಾರ ಕೈಗೊಳ್ಳಲು ಕೇಂದ್ರದ ಅವೈಜ್ಞಾನಿಕ ಅರ್ಥಿಕ ನೀತಿಗಳು ಖಂಡಿತ ಕಾರಣವಿದೆ. ಈ ದೇಶದಲ್ಲಿ ಸಂಗ್ರಹವಾಗುವ ಕೋಟ್ಯಾಂತರ ರೂಪಾಯಿ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ. ದೊಡ್ಡ ದೊಡ್ಡ ಹಗರಣಗಳು ನಡೆಯುತ್ತಿವೆ ಮತ್ತು ಐದು ವರ್ಷದಲ್ಲಿ ರಾಜಕಾರಣಿಗಳು ಕೋಟ್ಯಾಧಿಪತಿಗಳಾಗಿ ಮೆರಯುತ್ತಿದ್ದಾರೆ. ಮತ್ತು ಸರಕಾರವನ್ನು ಒತ್ತೆಯಾಗಿಟ್ಟು ಕೆಲಸ ಮಾಡುವ ಕೆಲವೊಂದು ಉದ್ಯಮಿಗಳ ಜೇಬು ತುಂಬುತಿದೆಯೆಂಬುದಕ್ಕೆ ರಫೇಲ್ ಹಗರಣವೇ ಸಾಕ್ಷಿ!.

ಇನ್ನು ಸಿದ್ದಾರ್ಥ್ ಬಳಿಯಿರುವ ಕೋಟ್ಯಾಂತರ ಆಸ್ತಿಯ ಹಿನ್ನಲೆ ಗಮನಿಸಿದಾಗ ಆತ ಯಾಕೆ ಸಾಯುತ್ತಾನೆ. ಆಸ್ತಿ ಮಾರಟ ಮಾಡಿ ನಷ್ಟ ಭರಿಸುವ ಸಾಮಾರ್ಥ್ಯ ವಿರುವ ಮತ್ತು ಧೈರ್ಯವಿರುವ ಆತ ನದಿಗೆ ಹಾರಿ ನಾಪತ್ತೆಯಾಗಿರುದರ ಬಗ್ಗೆ ಸೂಕ್ತ ತನಿಖೆಯಾಗಬೇಕು. ಮತ್ತು ಈ ನಾಪತ್ತೆಯ ಹಿಂದಿರುವ ಅಸಲಿ ಕಾರಣಗಳು ಕೂಡ ಬಹಿರಂಗವಾಗಬೇಕಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.