ಮಹಿಳೆಯರಿಗೆ ಪ್ರೋತ್ಸಾಹ ಕೊಡಿ: ಮೋಟಮ್ಮ

ಮೂಡಿಗೆರೆಯಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ

ಮೂಡಿಗೆರೆ: ಬ್ಯಾರಿ ಸಮುದಾಯದ ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಅವರು ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಹಿತ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡುವಂತಾಗಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಹೇಳಿದರು. ಮೂಡಿಗೆರೆ ಎಚ್.ಎಸ್.ಚಂದ್ರೇಗೌಡ ಬಡಾವಣೆಯ ರೈತ ಭವನದಲ್ಲಿ ಮಂಗಳವಾರ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2016 ಮತ್ತು 2017ನೇ ಸಾಲಿನ ಗೌರವ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಬ್ಯಾರಿ ಅಕಾಡೆಮಿಯು ಒಬ್ಬ ಮಹಿಳೆಯನ್ನು ಸದಸ್ಯೆಯನ್ನಾಗಿ ಮಾಡಿರುವುದು ಹೆಮ್ಮೆಯ ವಿಚಾರ. ಇನ್ನಷ್ಟು ಸಾಧನೆ ಆಗಬೇಕಿದೆ. ಚಿಕ್ಕಮಗಳೂರಿನಲ್ಲಿ ಬ್ಯಾರಿ ಸಮುದಾಯ ವಿಶ್ವಾಸಾರ್ಹವಾಗಿ ಜೀವನ ನಡೆಸಿದೆ. ಎಲ್ಲ ಜಾತಿ, ಧರ್ಮದ ಜತೆ ಸೌಹಾರ್ದಯುತವಾಗಿ ಬದುಕುತ್ತಿದೆ ಎಂದರು.

ಶಾಸಕ ಬಿ.ಬಿ.ನಿಂಗಯ್ಯ ಕಾರ್ಯಕ್ರಮ ಉದ್ಘಾಟಿಸಿ, ಬ್ಯಾರಿ ಸಾಹಿತ್ಯ ಸಮೃದ್ಧವಾಗಿದ್ದರೂ ಅಡಾಡೆಮಿ ಸ್ಥಾಪನೆಯ ಮೂಲಕ ಸರಕಾರದ ನೆರವಿನಿಂದ ಬೆಳವಣಿಗೆ ಕಾಣುತ್ತಿದೆ. ಬ್ಯಾರಿ ಸಮುದಾಯ ವಿಶಿಷ್ಟ ಸಂಸ್ಕೃತಿ ಹೊಂದಿದೆ‌ ಅಕಾಡೆಮಿಯಿಂದ ಇನ್ನಷ್ಟು ಉತ್ತಮ ಕಾರ್ಯಕ್ರಮಗಳು ನಡೆಯಲಿ ಎಂದರು. ಅಕಾಡೆಮಿ ಅಧ್ಯಕ್ಷ ಕರಂಬಾರು ಮೊಹಮ್ಮದ್ ಅಧ್ಯಕ್ಷತೆ ವಹಿಸಿದ್ದರು.
ಪಟ್ಟಣ ಪಂಚಾಯತ್ ಅಧ್ಯಕ್ಷೆ ರಮೀಝಾಬಿ, ಗಣ್ಯರಾದ ಸಿ.ಕೆ.ಇಬ್ರಾಹಿಂ, ಡಿ.ಬಿ.ಸುಬ್ಬೇಗೌಡ, ಬಿ.ಎಸ್.ಜಯರಾಂ, ಗಣೇಶ್ ಮಗ್ಗಲಮಕ್ಕಿ, ವಸಂತ ಎಸ್.ಪೂಜಾರಿ, ಜಾಕೀರ್ ಹುಸೇನ್, ರಘುರಾಂ ಅಡ್ಯಂತಾಯ, ವಿ.ಎಚ್.ಉಮ್ಮರ್, ಲೋಕಳ್ಳಿ ಉಮೇಶ್, ಕೆ.ಎಚ್.ಉಮರಬ್ವ ಮತ್ತಿತರರು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ: 2016ನೇ ಸಾಲಿನ ಸಾಹಿತ್ಯ/ ಸಂಶೋಧನೆ ವಿಭಾಗದ ಗೌರವ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಫಕೀರ್ ಮೊಹಮ್ಮದ್ ಕಟ್ಪಾಡಿ ಅವರಿಗೆ, ಜಾನಪದ ಕ್ಷೇತ್ರದಲ್ಲಿ ಮುಹಮ್ಮದ್ ಮಣ್ಣಗುಂಡಿ ಮತ್ತು ಬ್ಯಾರಿ ಕಲೆ ವಿಭಾಗದಲ್ಲಿ ಅಬೂಬಕ್ಕರ್ ಬಡ್ಡೂರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 2017ನೇ ಸಾಲಿನ ಸಾಹಿತ್ಯ/ ಸಂಶೋಧನೆ ವಿಭಾಗದ ಗೌರವ ಪ್ರಶಸ್ತಿಯನ್ನು ಉಮರ್ ಯು.ಎಚ್. ಅವರನ್ನು, ಬ್ಯಾರಿ ಕಲೆ ವಿಭಾಗದ ಪ್ರಶಸ್ತಿಯನ್ನು ಅಝೀಝ್ ಬೈಕಂಪಾಡಿ ಮತ್ತು ಜಾನಪದ ವಿಭಾಗದ ಪ್ರಶಸ್ತಿಯನ್ನು ಬಿ.ಎಂ.ಹಸೈನಾರ್ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ತಲಾ 50 ಸಾವಿರ ರೂ. ನಗದು, ಸ್ಮರಣಿಕೆ, ಸನ್ಮಾನ ಪತ್ರವನ್ನೊಳಗೊಂಡಿದೆ.ಪ್ರಶಸ್ತಿ ವಿಜೇತರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಅಕಾಡೆಮಿ ಅಧ್ಯಕ್ಷ ಕರಂಬಾರ್ ಮೊಹಮ್ಮದ್ ಸ್ವಾಗತಿಸಿದರು. ಸದಸ್ಯ ಮುಹಮ್ಮದ್ ತನ್ಸೀಫ್ ಕಾರ್ಯಕ್ರಮ ನಿರೂಪಿಸಿದರು. ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ವಂದಿಸಿದರು.

ಕವಿಗೋಷ್ಠಿ: ಈ ಸಂದರ್ಭದಲ್ಲಿ ಹಿರಿಯ ಕವಿ ಮುಹಮ್ಮದ್ ಬಡ್ಡೂರು ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಕವಿಗಳಾದ ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಶರೀಫ್ ನಿರ್ಮುಂಜೆ, ಹಸನಬ್ಬ ಮೂಡುಬಿದಿರೆ, ಮರಿಯಮ್ ಇಸ್ಮಾಯಿಲ್, ಬಶೀರ್ ಕಿನ್ಯ, ಅಲ್ತಾಫ್ ಬಿಳಗೊಳ, ಆಯಿಶಾ ಯು.ಕೆ. ಕವನಗಳನ್ನು ವಾಚಿಸಿದರು. ಹುಸೈನ್ ಕಾಟಿಪಳ್ಳ ಕವಿಗೋಷ್ಠಿ ನಡೆಸಿಕೊಟ್ಟರು.
ಇದಕ್ಕೂ ಮುನ್ನ ರಿಯಾಝ್ ಅಶ್ರಫ್ ಕಲಾಕಾರ್ ಅವರ ನಿರೂಪಣೆಯಲ್ಲಿ ಬ್ಯಾರಿ ಸಂಗೀತ ರಸಮಂಜರಿ ನಡೆಯಿತು.