ಹೂಡೆ: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಬ್ರಹ್ಮಾವರ ಹಾಗೂ ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆ ಇವರುಗಳ ಜಂಟಿ ಆಶ್ರಯದಲ್ಲಿ ಬ್ರಹ್ಮಾವರ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾ ಕೂಟ ಇತ್ತೀಚೆಗೆ ನಡೆಯಿತು.

ಆಕಾಶಕ್ಕೆ ಬಲೂನು ಹಾರಿಸುವುದರ ಮೂಲಕ ಈ ಕ್ರೀಡಾಕೂಟವನ್ನು ಉಡುಪಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಶೀಲಾ ಕೆ. ಶೆಟ್ಟಿ ಉದ್ಘಾಟಿಸಿದರು. ಇವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡುತ್ತಾ “ಕ್ರೀಡೆ ಶಿಸ್ತುಗಳನ್ನು ಕಲಿಸುತ್ತದೆ, ಮಕ್ಕಳು ದೈಹಿಕವಾಗಿ ಸದೃಢರಾದರೆ ಅವರು ಮಾನಸಿಕವಾಗಿ ಸಮರ್ಥರಾಗುತ್ತಾರೆ, ಈ ಕ್ರೀಡಾಕೂಟವನ್ನು ಆಯೋಜಿಸಿದ ಸಾಲಿಹಾತ್ ಶಿಕ್ಷಣ ಸಂಸ್ಥೆಯು ವಿಶೇಷವಾಗಿ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಕಲ್ಯಾಣಪುರ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಜನಾರ್ಧನ ತೋನ್ಸೆ ಇವರು ಮಾತನಾಡುತ್ತಾ “ಕ್ರೀಡೆ ನಮ್ಮಲ್ಲಿ ಏಕತೆಯ ಭಾವನೆ ಮೂಡಿಸುತ್ತದೆ, ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡರೆ ಸದಾ ಕ್ರಿಯಾಶೀಲರಾಗಿರುತ್ತಾರೆ” ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಜನಾರ್ಧನ ತೋನ್ಸೆ ಕ್ರೀಡಾ ಧ್ವಜಾರೋಹಣಗೈದರು. ಮಂದಾರ್ತಿ, ಪೆರ್ಡೂರು, ಬ್ರಹ್ಮಾವರ ಹಾಗೂ ಮಣಿಪಾಲ ಹೋಬಳಿಯ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಮೈರ್ಮಾಡಿ ಸುಧಾಕರ ಶೆಟ್ಟಿ ಧ್ವಜವಂದನೆ ಸ್ವೀಕರಿಸಿದರು. ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನೀತಾಗುರುರಾಜ್ ಕ್ರೀಡಾಜ್ಯೋತಿ ಪ್ರಜ್ವಲನಗೊಳಿಸಿದರು.

ವೇದಿಕೆಯಲ್ಲಿ ಕೆಮ್ಮಣ್ಣು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಫೌಜಿಯಾ ಸಾಧಿಕ್, ತೋನ್ಸೆ ವೆಲ್ ಫೇರ್ ಟ್ರಸ್ಟ್ ನ ಅಧ್ಯಕ್ಷರಾದ ಜನಾಬ್ ಇರ್ಷಾದ್, ನೈನಾ ಫ್ಯಾನ್ಸಿ ಮಾಲಕರಾದ ಜನಾಬ್ ಎಂ. ಎ. ಮೌಲಾ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಓ. ಆರ್. ಪ್ರಕಾಶ್, ಬಿ.ಆರ್.ಸಿ. ಸಂಯೋಜಕರಾದ ಶ್ರೀ ನಾಗರಾಜ್, ಸಾಲಿಹಾತ್ ಶಾಲೆಯ ಕಾರ್ಯದರ್ಶಿ ಜಿ. ಇಮ್ತಿಯಾಝ್, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ದಿನಕರ ಶೆಟ್ಟಿ, ಅನುದಾನಿತ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಶಾಂತಾರಾಜ ಶೆಟ್ಟಿ, ಸಾಲಿಹಾತ್ ಶಾಲೆಯ ಟ್ರಸ್ಟಿ ಜನಾಬ್ ಹುಸೇನ್ ಮಾಸ್ಟರ್, ಜನಾಬ್ ಅರ್ಷದ್ ಉಡುಪಿ, ಸಾಲಿಹಾತ್ ಶಾಲಾ ಮುಖ್ಯಸ್ಥರುಗಳಾದ ಶ್ರೀಮತಿ ಲವೀನಾ ಕ್ಲಾರಾ ಮತ್ತು ಸಮೀನಾ ನಝೀರ್ ಉಪಸ್ಥಿತರಿದ್ದರು.

ಈ ಸಂದರ್ಭ ಉಡುಪಿ ಜಿಲ್ಲಾ ದೈಹಿಕ ಪರಿವೀಕ್ಷಣಾಧಿಕಾರಿ ಶ್ರೀ ಮಧುಕರ ಹಾಗೂ ಸರ್ಕಾರಿ ಹಿ. ಪ್ರಾ. ಶಾಲೆ ಗುಂಡ್ಮಿ ದೈಹಿಕ ಶಿಕ್ಷಕ ಗಣಪತಿ ನಾೈರಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಶ್ರೀ ಸಾಧು ಶೇರಿಗಾರ್, ಜ್ಯೋತಿ ಚಿತ್ರಪಾಡಿ, ಆದರ್ಶ ಶಿಕ್ಷಕ ಪ್ರಶಸ್ತಿ ವಿಜೇತರಾದ ಭಾಸ್ಕರ ಪೂಜಾರಿ, ಗಣೇಶ ಕುಕ್ಕೆಹಳ್ಳಿ ಇವರನ್ನು ಸನ್ಮಾನಿಸಲಾಯಿತು.

ಬ್ರಹ್ಮಾವರ ವಲಯ ದೈಹಿಕ ಪರಿವೀಕ್ಷಣಾಧಿಕಾರಿ ಶ್ರೀ ಭುಜಂಗ ಶೆಟ್ಟಿ ಪ್ರಾಸ್ತಾವಿಕ ಮಾತನ್ನಾಡಿದರು. ಸಾಲಿಹಾತ್ ಶಾಲೆಯ ಕಾರ್ಯದರ್ಶಿ ಜಿ. ಇಮ್ತಿಯಾಝ್ ಸ್ವಾಗತಿಸಿದರು. ಶಾಲಾ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ ಧನ್ಯವಾದಗೈದರು. ಶಿಕ್ಷಕ ಸತೀಶ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.