ಭಯೋತ್ಪಾದನೆ ನಿರ್ದಿಷ್ಟ ಧರ್ಮದವರ “PATENT” ಎಂಬಂತೆ ರಾತ್ರಿ ಹಗಲು ತೀರಾ ಸಂವೇದನಾ ಹೀನವಾಗಿ ನಮ್ಮ ಮಾಧ್ಯಮಗಳು ಪ್ರಚಾರ ಪ್ರಸಾರ ಮಾಡಿದಲ್ಲದೆ ಅನೇಕ ಮಾಧ್ಯಮಗಳು ದುರುದ್ದೇಶ ಪೂರ್ವಕವಾಗಿ ಒಂದು ಸಮುದಾಯ ಯುವಕರು ಭಯೋತ್ಪಾದನೆಯ ಸೂತ್ರಧಾರಿಗಳು ,ಷಡ್ಯಂತ್ರದ ರಚನಾಕಾರರು ಎಂಬ ಕಥೆಗಳನ್ನು ಹಣೆದು ಒಂದು ಗಣನೀಯ ಸಂಖ್ಯೆಯ ಯುವಕರನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಿದಲ್ಲದೇ, ಆ ಯುವಕರು ನೆಲದ ಕಾನೂನಿನ ಮೊರೆ ಹೊಕ್ಕು ಕಾನೂನು ಹೋರಾಟದ ಮೂಲಕ ನಿರಪರಾಧ ಸಾಬೀತುಪಡಿಸಿ ಹೊರಬಂದರೂ ವಿಷಾದ ವ್ಯಕ್ತಪಡಿಸುವ ಸೌಜನ್ಯವೂ ಈ ಅಕ್ಷರ ಭಯೋತ್ಪಾದಕರಿಗೆ ಇರಲಿಲ್ಲ.

Intelligence Agency ಯ ನಡೆಯೂ ಪೂರ್ವಾಗ್ರಹ ಪೀಡಿತ ನಡೆಯಂತೆಯೇ ಇತ್ತು. ಅನಂತರ ನಡೆದ ಸಂಜೋತ ಎಕ್ಸ್ಪ್ರೆಸ್ ಸ್ಪೋಟ, ಮಕ್ಕಾ ಮಸೀದಿ ಸ್ಪೋಟ, ಮಾಲೇಗಾಂವ್ ಸ್ಪೋಟ, ಇನ್ನಿತರ ಸರಣಿ ಭಯೋತ್ಪಾದನಾ ಕೃತ್ಯಗಳಲ್ಲಿ ದೇಶಪ್ರೇಮದ ಸ್ವಯಂ ಘೋಷಿತ ಗುತ್ತಿಗೆದಾರರ (Contractor’s) ಸಾಮಿಪ್ಯವುಳ್ಳವರ ಹೆಸರುಗಳು ಬೆಳಕಿಗೆ ಬರತೊಡಗಿದಾಗ ಮಾಧ್ಯಮಗಳ ದೊಡ್ಡ ವಿಭಾಗ ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನಿಡ ತೊಡಗಿತು. ಕೆಲವೊಮ್ಮೆ ಈ ಕುರಿತು ಜಾಣ ಮೌನ ವಹಿಸಿ ಸುದ್ದಿಗಳನ್ನೆ ನಿರ್ಲಕ್ಷಿಸಿತು. ಈ ಎಲ್ಲಾ ಭಯೋತ್ಪಾದಕತೆಯ ಹಿಂದಿರುವವರನ್ನು ಬೆಳಕಿಗೆ ತರುವಲ್ಲಿ ಶ್ರಮವಹಿಸಿದ ATS ನ ಪ್ರಮುಖ ಹೆಮಂತ್ ಕರ್ಕರೆಯವರ ಕೊಲೆ ಸಿನಿಮಿಯ ಮಾದರಿಯಲ್ಲಿ ನಡೆಯಿತು. ಸರಕಾರಕ್ಕೆ ಇವುಗಳ ಕುರಿತು ವಸ್ತುನಿಷ್ಠ ತನಿಖೆ ನಡೆಸುವ ಇಚ್ಚಾಶಕ್ತಿಯೇ ಇರಲ್ಲಿಲ್ಲ.

ಹಾಗೆಯೇ ಗುಜರಾತ್’ನಲ್ಲಿ ವ್ಯವಸ್ಥೆಯ ಸಂಪೂರ್ಣ ಸಹಯೋಗದಿಂದ ಏಕ ಪಕ್ಷೀಯವಾಗಿ ಒಂದು ಸಮುದಾಯದ ವಿರುದ್ಧ ನಡೆಸಲ್ಪಟ್ಟ ಅತಿದೊಡ್ಡ ಸಮೂಹ ನಾಶಕ ಭಯೋತ್ಪಾದಕ ಕೃತ್ಯಗಳನ್ನು ನಮ್ಮ ಮಾಧ್ಯಮಗಳು ಕೋಮು ಗಲಭೆಗಳೆಂದು ಕರೆಯುವ ಮೂಲಕ ತಿಪ್ಪೆಸಾರಿಸುವ ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸಿದವು. ಈ ಎಲ್ಲಾ ಸಫಲತೆಗಳಿಂದ ಪ್ರೇರಣೆ ಪಡೆದು ಕೊಬ್ಬಿದ ಮಾನವೀಯತೆಯ ವೈರಿಗಳಾದ ಈ ರಾಕ್ಷಸೀಯ ಪಡೆಯು ಅಟ್ಟಹಾಸದ ಠೇಂಕಾರದೊಂದಿಗೆ ಮುಂದುವರಿದು ತಮ್ಮ ಸಂಹಾರ ಯಾತ್ರೆಯ ಮುಂದಿನ ಗುರಿಯಾಗಿ ನರೇಂದ್ರ ಧಾಬೋಲ್ಕರ್, ಗೋವಿಂದ ಪನ್ಸಾರೆ, ಎಮ್.ಎಮ್. ಕಲ್ಬುರ್ಗಿ, ಗೌರಿ ಲಂಕೇಶ್ ಮುಂತಾದ ಮನುಷ್ಯ ಪ್ರೇಮ, ಮಾನವೀಯತೆಯ ಸಂಕೇತಗಳನ್ನು ಆಯ್ದುಕೊಂಡು ಅವರುಗಳ ರಕ್ತ ಚೆಲ್ಲಾಡಿದ್ದಾರೆ. ಇವರುಗಳ ಪೈಕಿ ಗೌರಿ ಲಂಕೇಶರ ಹತ್ಯೆಯ ತನಿಖೆ ಸಲ್ಪ ಮಟ್ಟಿಗೆ ಸರಿಯಾದ ದಿಕ್ಕಿನಲ್ಲಿ ಸಾಗಿ ಹತ್ಯೆಗಳ ಹಿಂದಿರುವ ಕೆಲವು ಕೊಂಡಿಗಳ ಬಂಧನ ನಡೆದು ವಿಚಾರಣೆಗೆ ಒಳಪಟ್ಟಾಗ ಈ ಎಲ್ಲಾ ಕ್ರೂರ ಕೃತ್ಯಗಳು ಪರಸ್ಪರ ಸಂಬಂಧ ಹೊಂದಿದ್ದು ಸೈದಾಂತಿಕ ಸಾಮ್ಯತೆಯು ಬೆಳಕಿಗೆ ಬಂದಿವೆ.

ಇದಕ್ಕೆ ಪೂರಕವಾಗಿ ದೆಹಲಿ & ದೇಶದ ಇನ್ನಿತರ ಕಡೆಗಳಲ್ಲಿ ಸಜೀವ ಬಾಂಬ್ಗಳ ಜೋತೆಗೆ ಸನಾತನ ಸಂಸ್ಥೆಯ ಸದಸ್ಯರ ಬಂಧನವಾಗಿದೆ. ಇವರೆಲ್ಲರ ಕರುಳು ಬಳ್ಳಿ ಸಂಬಂಧದ ಬೇರುಗಳು ಎಲ್ಲಿಯವರೆಗೆ ಹರಡಿಕೊಂಡಿದೆ ಎಂಬುದು ಜಾಹೀರಾಗಿದೆ. ಯಾವ ಸಿದ್ದಾಂತದ ವಿಷಬೀಜ ಬಿತ್ತನೆಯಿಂದ ಈ ವಿಷಯುಕ್ತ ಫಸಲು ಬಂದಿದೆ ಎಂಬುದೂ ಕೂಡಾ ಜಾಹೀರುಗೊಂಡಿದೆ. ಇವರುಗಳು ತಾವು ಹಿಂದೂ ಧರ್ಮದ ಸಂರಕ್ಷಕರೆಂದು ಸ್ವಯಂ ಘೋಷಿಸಿ ಕೊಂಡಿದ್ದರಿಂದ ಜನರು ಒಮ್ಮೆಗೆ ಹಿಂದೂ ಧರ್ಮದ ಕಡೆಗೆ ಸಂಶಯದ ದೃಷ್ಟಿಯಿಂದ ನೋಡಿದ್ದಾರೆ, ಅದರೂ .. ಇದು ಖಂಡಿತಾ ತಪ್ಪು . ಯಾವುದೇ ಧರ್ಮದ ರಕ್ಷಕ ಮತ್ತು ಪ್ರಚಾರಕ ಎಂದು ಸ್ವಯಂ ಘೋಷಿಸಿಕೊಂಡು ಆತ ಅಥವಾ ಆ ಸಂಸ್ಥೆಯು ಮಾನವೀಯತೆಗೆ ಮಾರಕವಾದ ಕೃತ್ಯಗಳನ್ನು ಎಸಗಿದರೆ ಅದಕ್ಕೆ ಆಯಾ ಧರ್ಮಗಳು ಕಾರಣವಾಗುದು ಹೇಗೆ ? ಖಂಡಿತಾ ಇಲ್ಲಾ, ಆದ್ದರಿಂದ ಹಿಂದೂ ಭಯೋತ್ಪಾದನೆ ಎಂಬ ಪಾರಿಭಾಷಿಕದ ಬಳಕೆಗೆ ವಿರುದ್ಧ ಅಭಿಪ್ರಾಯ ವ್ಯಕ್ತವಾಗಿದೆ. ಹೌದು… ಹಿಂದೂ ಧರ್ಮದ ಹೆಸರನ್ನು ಬಳಸಿಕೊಂಡು ಭಯೋತ್ಪಾದನಾ ಕೃತ್ಯಗಳನ್ನು ನಡೆಸುತ್ತಿರುವ ಮನುಷ್ಯತ್ವ ವಿರೋಧಿ ಸಿದ್ದಾಂತ ಪ್ರೇರಿತ ಅಧರ್ಮಿಗಳ ಗುಂಪುಗಳ ಕಾರಣ ಧರ್ಮದೊಂದಿಗೆ ಭಯೋತ್ಪಾದನೆಯ ಭೂತವನ್ನು ಜೋಡಿಸುವುದು ಖಂಡಿತವಾಗಿಯೂ ತಪ್ಪು . ಅಲ್ಲದೆ ಇಂತಹ ತಪ್ಪಿನಿಂದಾಗಿ ದೂಷಣೆಗೊಳಗಾದ ಧರ್ಮದೊಂದಿಗೆ ಒಲವುಳ್ಳ ಜನರ ಒಂದು ಗಣನೀಯ ಸಂಖ್ಯೆಯನ್ನು ಕ್ರೂರ ಕೃತ್ಯಗಳನ್ನು ಎಸಗುತ್ತಿರುವ ಅಧರ್ಮಿ ಭಯೋತ್ಪಾದಕರ ಹಿತೈಷಿಗಳಾಗುವತ್ತ ದೂಡಿದಂತಾಗುತ್ತದೆ ಅಥವಾ ಅವರ ಬಗ್ಗೆ ಮೃದು ನಿಲುವು ತಾಳುಲು ಪುಸಲಾಯಿಸಿದಂತಾಗುತ್ತದೆ.

ಇದರ ಪರಿಣಾಮವಾಗಿ ಧರ್ಮದ ಹೆಸರಲ್ಲಿ ಅಕೃತ್ಯಗಳನ್ನು ಎಸಗುವ ಈ ಭಯೋತ್ಪಾದಕರ ಕಾಲಾಳುಗಳ ಸಂಖ್ಯೆಯಲ್ಲಿ ವೃದ್ದಿಯೂ ಆಗುತ್ತದೆ. ಹಾಗೂ ಧರ್ಮದ ಹೆಸರಲ್ಲಿ ದೇಶದಲ್ಲಿ ದೊಂಬಿ, ಕ್ಷೋಭೆಯನ್ನು ಹರಡಿ ಅಧಿಕಾರವನ್ನು ಪಡೆಯುತ್ತಿರುವ ಸಂಕೀರ್ಣ ಮಾನಸಿಕತೆಯ ರಾಜಕೀಯ ವ್ಯಾಪಾರಿಗಳ ಚುನಾವಣಾ ವ್ಯೂಹ ರಚನೆಗೆ ಸಹಕಾರ ನೀಡಿದಂತೆಯೂ, ಈ ಮನುಷ್ಯತ್ವದ ದ್ವೇಷಿಗಳು ಅಧಿಕಾರಕ್ಕೇರಲು ಮೆಟ್ಟಿಲುಗಳಾದಂತೆಯೂ ಆಗುತ್ತದೆ. ಆದ್ದರಿಂದ ಮಾನವೀಯತೆಯಿಂದ ಕೂಡಿದ ಪರಸ್ಪರ ಸಹಕಾರದಿಂದ ನಡೆಯುವ ಸುಮಧುರ ನಾಳೆಗಾಗಿ ಎಚ್ಚರದ ನಡೆ ಖಂಡಿತಾ ಅತ್ಯಗತ್ಯ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.