ಸೂಲಿಬೆಲೆಯ ಸುಳ್ಳಿಗೊಂದು ಸತ್ಯದ ಗುದ್ದು!

459

ಲೇಖಕರು: ಐ.ಎಮ್ ಲಿಟಿಗಿರಿ

“ದೇಶವನ್ನು ದುರ್ಬಲಗೊಳಿಸುವ ಕೈ ಪ್ರಣಾಳಿಕೆ” ಎಂಬ ಶೀರ್ಷಿಕೆಯ ಚಕ್ರವರ್ತಿ ಸೂಲಿಬೆಲೆಯವರ ಅಂಕಣವನ್ನು ಓದಿದೆ.ಕಾಂಗ್ರೆಸ್ ಪ್ರಣಾಳಿಕೆ ಮೇಲಿನ ಶೀರ್ಷಿಕೆಯನ್ನು ಬೆಂಬಲಿಸುವಂತೆ ರೂಪಿಸಲ್ಪಟ್ಟಿದೆ ಎನ್ನುತ್ತಾರೆ. ಈ ಮನುಷ್ಯನಿಗೆ ಸ್ವಲ್ಪವೂ ಸಾಮಾನ್ಯ ಪರಿಜ್ಞಾನ ಇಲ್ಲದಂತೆ ಕಾಣುತ್ತದೆ ಏಕೆಂದರೆ ದೇಶಕ್ಕೆ ಒಳ್ಳೆಯ ಸರ್ಕಾರ ರಚಿಸಲು ಎಲ್ಲಾ ರಾಜಕೀಯ ಪಕ್ಷಗಳು ಒಳ್ಳೆಯ ಪ್ರಣಾಳಿಕೆಗಳನ್ನು ರೂಪಿಸುತ್ತವೆ. ಯಾವುದೇ ಪಕ್ಷವು ತನ್ನ ಪ್ರಣಾಳಿಕೆಯನ್ನು ರೂಪಿಸುವಾಗ ದೇಶಕ್ಕೆ ಪೂರಕವಾಗುವ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತವೆ ಎನ್ನುವುದನ್ನು ಮರೆಯುತ್ತಾರೆ.
ಪ್ರಣಾಳಿಕೆಗಳು ರಾಷ್ಟ್ರದ ಕುರಿತಂತೆ ಆಯಾ ಪಕ್ಷದ ವ್ಯಕ್ತಿಯ ಕನಸುಗಳ ಗುಚ್ಚ.ಹಾಗಂತ ಅಸಾಧ್ಯವಾಗದ ಕನಸುಗಳ ಸಂಕಲನ ಅದಾಗಿರಬಾರದು ಎನ್ನುತ್ತಾರೆ ಇವರ ಪ್ರಕಾರ ಕಾಂಗ್ರೆಸ್ ಪ್ರಣಾಳಿಕೆ ಅಸಾಧ್ಯವಾಗದ ಕನಸುಗಳ ಸಂಕಲನವೇ? ಬಿಜೆಪಿಯವರ ೨೦೧೪ ರ ಪ್ರಣಾಳಿಕೆ ಮತ್ತೇನು?? ನಿಮ್ಮ ಕೈಲಿ ಆಗದ ಕೆಲಸ ಬೇರೆಯವರಿಗೆ ಮಾಡಲು ಆಗಲ್ಲ ಎನ್ನುವುದು ಮೂರ್ಖತನ ಪರಮಾವಧಿ ಎಂದು ಅನಿಸುತ್ತದೆ. ಕನಸು ಯಾವಾಗಲೂ ದೊಡ್ಡದಾಗಿರಬೇಕು ಎಂದು ಕಲಾಂಜಿ ಹೇಳುತ್ತಾರೆ. ಅದೇ ರೀತಿ ಮೋದಿಯವರು ೨೦೧೪ರಲ್ಲಿ ಕಂಡ ಕನಸು ತಿರುಕನ ಕನಸೇ?? ಕುಮಾರಸ್ವಾಮಿಯವರು ವಿಧಾನಸಭಾ ಚುನಾವಣಾ ಸಮಯದಲ್ಲಿ ರೈತರ ಸಾಲ ಮನ್ನಾ ಬಗ್ಗೆ ಅವರ ಹೇಳಿಕೆಯನ್ನು ನೆನಪಿಸುವಾಗ ತಪ್ಪನ್ನು ಮಾಡುತ್ತಾರೆ ಅದೇನೆಂದರೆ ಕುಮಾರಸ್ವಾಮಿಯವರ ಹೇಳಿದ್ದು ಸ್ವಂತ ಬಲದ ಮೇಲೆ ಸರ್ಕಾರ ರಚಿಸಿದರೆ ಸಂಪೂರ್ಣ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದರು. ಅದನ್ನು ಸೂಲಿಬೆಲೆಯವರು ಮರೆತುಬಿಟ್ಟಿದ್ದಾರೆ.

ಹಾಗೆಯೇ ಮೋದಿಯವರ ೧೫ಲಕ್ಷ ರೂ ಪ್ರತಿಯೊಬ್ಬರ ಖಾತೆಗೆ ಜಮಾ ಮಾಡುವುದನ್ನು ಮರೆತು ಗೋಸುಂಬೆತನವನ್ನು ಪ್ರದರ್ಶಿಸುತ್ತಾರೆ. ಉದ್ಯಮಿಗಳ ಸಾಲ ಮನ್ನಾ ಮಾಡಲು ಮೋದಿಯವರಿಗೆ ಹಣ ಎಲ್ಲಿಂದ ಬಂತು. ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮತ್ತಿತರ ಯೋಜನೆಗಳಿಗೆ ನಿಯಮಗಳನ್ನು ರೂಪಿಸಲು ಹೆಣಗಾಡುತ್ತಿದ್ದಾರೆ ಎನ್ನುತ್ತಾರೆ. ಅವರು ಅಷ್ಟಾದರೂ ಮಾಡುತ್ತಿದ್ದಾರೆ ಮೋದಿಯವರು ಅದನ್ನು ಮಾಡದೇ ಕೈಕಟ್ಟಿಕೊಂಡು ಕುಳಿತರು ಇದನ್ನು ಇವರು ಪ್ರಶ್ನೆ ಮಾಡುವುದಿಲ್ಲ.
ಇಲ್ಲಿನ ಅನ್ನ ತಿಂದು ನೀರ್ಗುಡಿದು ಇದೇ ದೇಶವನ್ನು ತುಂಡು ಮಾಡುವ ಮಾತುಗಳನ್ನಾಡುವ ತುಕ್ಡೇ ತುಕ್ಡೇ ಗ್ಯಾಂಗ್ ಗೆ ಗೊಬ್ಬರವರೆದು ಪೋಷಿಸುವ ಸ್ವರೂಪದಂತಿದೆ ಎನ್ನುವ ಸೂಲಿಬೆಲೆಯವರು ತಮ್ಮ ಅಜ್ಞಾನವನ್ನು ಪ್ರದರ್ಶಿಸುತ್ತಾರೆ ಬಿಜೆಪಿಯವರೇ ಹುಟ್ಟು ಹಾಕಿದ ಈ ಸುಳ್ಳು ಸುದ್ದಿ ಸುಪ್ರೀಂ ಕೋರ್ಟ್ ನಲ್ಲಿ ಕನ್ನಯ್ಯ , ಉಮರ ಮತ್ತವರ ತಂಡದವರು ತುಕ್ಡೇ ತುಕ್ಡೇ ಎನ್ನುವ ಘೋಷಣೆಗಳನ್ನು ಕೂಗಿಲ್ಲ ಎನ್ನುವುದು ಸಾಬೀತಾಗಿದೆ ಎನ್ನುವುದು ಗೊತ್ತಿದ್ದು ಗೊತ್ತಿಲ್ಲದಂತೆ ನಾಟಕ ಮಾಡುತ್ತಾರೆ. IPC Section124A ತೆಗೆದು ಹಾಕುವುದು ಒಳ್ಳೆಯ ನಿರ್ಧಾರ ಏಕೆಂದರೆ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ ಜನರಿಂದ ಜನರಿಗಾಗಿ ಜನರೇ ಆಳಲ್ಪಡುವುದು. ಇಲ್ಲಿ ಆಳ್ವಿಕೆ ಮಾಡುವವರ ದಾರಿ ತಪ್ಪಿದಾಗ ಅದರ ವಿರುದ್ಧ ಅಸಮಾಧಾನ ತೋರಿಸುವುದು ನಮ್ಮ ಹಕ್ಕಾಗಿದೆ. ಅದಕ್ಕೆ IPC section124A ತೊಡಕಾಗಿದೆ ಅದನ್ನು ತೆಗೆದು ಹಾಕುವುದು ಒಳ್ಳೆಯ ನಿರ್ಧಾರ.. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ದೆಹಲಿಯಲ್ಲಿ ಕನ್ನಯ್ಯ ಕುಮಾರ್ ಮತ್ತು ಉಮರ್ ಖಾಲಿದ ಅವರು “ಭಾರತ್ ತೇರೆ ತುಕ್ಡೇ ಹೊಂಗೇ ಇನ್ಶಾ ಅಲ್ಲಾ” ಎಂದು ಕೂಗಿದ್ದರೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಅವರ ಮೇಲೆ ಇದೇ IPC section 124A ಕೇಸನ್ನು ಹಾಕಲಾಗಿತ್ತು. ಅದು ಈಗ ಸುಪ್ರೀಂ ಕೋರ್ಟಿನಲ್ಲಿ ಕನ್ನಯ್ಯ ಕುಮಾರ್ ,ಉಮರ್ ಖಾಲಿದ ಮತ್ತವರ ಸಂಗಡಿಗರು ಹಾಗೆ ಕೂಗಿಲ್ಲ ಎಂದು ತೀರ್ಪು ನೀಡಿದ್ದನ್ನು ಸೂಲಿಬೆಲೆಯವರು ಮರೆತ್ತಿದ್ದಾರೆಯೇ ಅಥವಾ ಜನರಿಗೆ ಮಂಕು ಬೂದಿ ಯನ್ನು ಹಚ್ಚುತ್ತಿದ್ದಾರೆಯೋ?? ಕನ್ನಯ್ಯ ಮತ್ತು ಉಮರ್ ಖಾಲಿದ ರನ್ನು ಭೇಟಿ ಮಾಡಿದ್ದು ರಾಹುಲ್ ಗಾಂಧಿಯವರ‌ ಮಾಡಿದ ತಪ್ಪು ಅದೇ ಬಿಜೆಪಿಯವರು ಅಸಿಫಾ ಬಾಲಕಿಯ ಅತ್ಯಾಚಾರ ಮಾಡಿ ಕೊಲೆಮಾಡಿದ ಆರೋಪಿಯನ್ನು ಬೆಂಬಲಿಸಿದ್ದು ಮಾತ್ರ ಅತ್ಯುತ್ತಮ ಕೆಲಸ ಬೂಟಾಟಿಕೆಗೂ ಮಿತಿ ಇರಬೇಕಲ್ಲವೇ ಸೂಲಿಬೆಲೆಯವರೇ??? ತಾವು ಮಾತ್ರ ಕೊಲೆ ಆರೋಪಿ ಮತ್ತು ಅತ್ಯಾಚಾರಿ ಆರೋಪಿಗಳನ್ನು ಕರೆದು ಚುನಾವಣೆಗೆ ಟಿಕೆಟ್ ನೀಡಿದ್ದೂ ಬಹಳ ಒಳ್ಳೆಯ ಕೆಲಸ ಅಲ್ಲವೇ ಸೂಲಿಬೆಲೆಯವರೇ? ಮಾಲೇಗಾವ್ ಬಾಂಬ್ ಸ್ಪೋಟದ ಆರೋಪಿಯನ್ನು ಸಮರ್ಥನೆ ಮಾಡುವ ನಿಮಗೆ ಏನೆನ್ನಬೇಕು.ಅವರ ವಿರುದ್ಧ ಸರಿಯಾದ ಸಾಕ್ಷಿಯನ್ನು ನೀಡದೇ ಇದ್ದಾಗ ಕೋರ್ಟ್ ನ್ಯಾಯಾಧೀಶರ ತೀರ್ಪು ನೀಡುವಾಗ ಹೇಳಿಕೆಯು ನಮ್ಮ ತನಿಖಾ ವ್ಯವಸ್ಥೆಯ ಮೇಲೆ ಭರವಸೆನ್ನು ಕಳೆದುಕೊಳ್ಳುವಂತೆ ಮಾಡಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಗೂಂಡಾಗಳನ್ನು ಬಗ್ಗು ಬಡೆಯಲು ಕಠಿಣ ಸಾಹಸ ಮಾಡುತ್ತಿದ್ದಾರೆ ಎನ್ನುತ್ತಿರುವ ಸೂಲಿಬೆಲೆಯವರು ಹಾಗಾದ್ರೆ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಾಬ್ ಲಿಂಚಿಂಗ್ ಮಾಡುವವರು ಸಜ್ಜನ ಜನರೇ.

ಅಮಾಯಕ ಮುಸ್ಲಿಂ ಮತ್ತು ಹಲ್ಲೆಗೊಳಗಾಗುತ್ತಿರುವ ದಲಿತರು ಗೂಂಡಾಗಳೇ… ? ಗೋವು ರಕ್ಷಕರ ಹೆಸರಿನಲ್ಲಿ ದೌರ್ಬಲ್ಯ ಮಾಡುತ್ತಿರುವ ಗೂಂಡಾಗಳ ಕೈಯಲ್ಲಿ ಅಧಿಕಾರ ಕೊಟ್ಟಿಲ್ಲವೇ? ಆರಕ್ಷನಿಗೇ ರಕ್ಷಣೆ ಇಲ್ಲದಿರುವ ಉತ್ತರ ಪ್ರದೇಶದಲ್ಲಿ ಜನಸಾಮಾನ್ಯರ ಸ್ಥಿತಿ ಹೇಗಿರಬೇಡ???
ರಾಷ್ಟ್ರೀಯ ತನಿಖಾ ದಳಕ್ಕೆ ಸಂಬಳ ಯಾರಿಂದ ವಸೂಲಿ ಮಾಡಲಾಗುತ್ತದೆ? ನಮ್ಮ ಪ್ರತಿನಿಧಿಗಳು ಇರುವ ಸಂಸತ್ತಿಗೆ ಏಕೆ ರಾಷ್ಟ್ರೀಯ ತನಿಖಾ ದಳ ಬಾದ್ಯಸ್ಥವಾಗಬಾರದು ಇದರಿಂದ ರಾಷ್ಟ್ರೀಯ ತನಿಖಾ ದಳ ಪಾರದರ್ಶಕತೆ ಮತ್ತು ಶಕ್ತಿ ಹೆಚ್ಚುತ್ತದೆ.

ಅಫ್ಸ್ಪಾ ಕಾನೂನಿನಲ್ಲಿ ಪರಾಮರ್ಶಿಸಿ ನಂತರ ಅದರಲ್ಲಿ ಕೆಲ ಬದಲಾವಣೆ ಮಾಡಲಾಗುದು ಎಂದಿದೆ.. ಅದನ್ನು ಸಂಪೂರ್ಣ‌ ತೆಗೆದುಹಾಕುವುದಿಲ್ಲ. ಸೂಲಿಬೆಲೆಯವರಿಗೆ ಇದರಿಂದ ಕಾಂಗ್ರೆಸ್ ಸೈನಿಕರ ಬಗ್ಗೆ ಅಸಡ್ಡೆ ಭಾವನೆ ತೋರಿಸುತ್ತಿದೆ ಎಂದು ತೋರುತ್ತಿದೆ ಎನ್ನುತ್ತಾರೆ. ಹಾಗೇನೂ ಇಲ್ಲ. ಸೈನಿಕರಿಗೆ ಸರಿಯಾದ ಆಹಾರವನ್ನು ನೀಡದೇ ಇದ್ದದ್ದು ಬಿಜೆಪಿಯ ಅಸಡ್ಡೆಯ ಭಾವನೆ ಅಲ್ಲವೇ? ಅದನ್ನು ಪ್ರಶ್ನೆ ಮಾಡಿದ‌ ಸೈನಿಕನನ್ನು ಸೇನೆಯಿಂದ ವಜಾ ಮಾಡಿದ್ದು ಎಂತಹ ಭಾವನೆ? ಮೋದಿ ಸರ್ಕಾರ ಬಂದ ನಂತರದಲ್ಲಿ ಭಾರತದಲ್ಲಿ ಭಯೋತ್ಪಾದನಾ ಕೃತ್ಯಗಳು ಕಡಿಮೆಯಾಗಿದೆ ಅನ್ನುತ್ತೀರಿ.. ಉರಿ ಮತ್ತು ಪುಲ್ವಾಮಾ ದಾಳಿಗಳು ಭಯೋತ್ಪಾದನಾ ಕೃತ್ಯಗಳಲ್ಲವೇ?? ಇದನ್ನೆಲ್ಲಾ ಮರೆಮಾಚಿ ಸುಳ್ಳನ್ನು ಪ್ರಚಾರ ಮಾಡುತ್ತಿರುವುದು ದುರದೃಷ್ಟಕರ.ನ್ಯಾಯ್ ಯೋಜನೆ ಅಷ್ಟು ಸುಲಭವಲ್ಲ ಅದು ಎಲ್ಲರಿಗೂ ಗೊತ್ತು ಅದಕ್ಕೆ ಬೇಕಾದ ಸಲಹೆ ಸೂಚನೆಗಳನ್ನು ನೀಡುವ ಸಿದ್ಧವಿರುವದಾಗಿ ಖ್ಯಾತ ಆರ್ಥಿಕ ತಜ್ಞರಾದ ರಘುನಾಥ್ ರಾಜನ್… ಮತ್ತು ಇನ್ನಿತರು ಒಪ್ಪಿರುವಾಗ ಅದನ್ನು ಅವರು ನಿಭಾಯಿಸುತ್ತಾರೆ.ಮೋದಿ ಬಂದ ನಂತರ ಸಿಕ್ಕಾಪಟ್ಟೆ ಆರ್ಥಿಕ ಅಭಿವೃದ್ಧಿಯಾಗಿದ್ರೆ ಇದೇನು ದೊಡ್ಡ ಮಾತಲ್ಲ… ಭಾರತದ ಆರ್ಥಿಕ ವ್ಯವಸ್ಥೆ ಹಣ ಅಮಾನ್ಯೀಕರಣದಿಂದ ಹದಗೆಟ್ಟಿರುವುದನ್ನು ಸೂಲಿಬೆಲೆಯವರು ಮುಚ್ಚಿಡುತ್ತಾರೆ.. ಬಿಜೆಪಿಯವರು ಒಳ್ಳೆಯ ಸರ್ಕಾರ ನೀಡಿದ್ದರೆ ತಮ್ಮ ಸ್ವಂತ ಸಾಧನೆಯ ಆಧಾರದ ಮೇಲೆ ಮತ ಕೇಳುತ್ತಿದ್ದರು… ಸಾಧನೆಯ ಅಧಾರದ ಮೇಲೆ ಮತ ಕೇಳಲು ಇಲ್ಲದ ಸ್ಥತಿಯಲ್ಲಿರುವ ಬಿಜೆಪಿ ಬೇರೆ ರೀತಿಯಲ್ಲಿ ಮತ ಕೇಳತ್ತಿರುವುದು ದುರದೃಷ್ಟಕರ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.