– ಜಿ.ಎಂ. ಶರೀಫ್ ಹೂಡೆ

ವಿದ್ಯಾರ್ಥಿನಿಯೊಬ್ಬಳನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ನಾಲ್ವರು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ದ.ಕ. ದ ಪುತ್ತೂರಿನಲ್ಲಿ ನಡೆದಿದೆ. ಅಮಲು ಪದಾರ್ಥವನ್ನು ವಿದ್ಯಾರ್ಥಿನಿಗೆ ತಿನ್ನಿಸಿ ಅತ್ಯಾಚಾರ ನಡೆಸಿದ್ದು ಮಾತ್ರವಲ್ಲ ಅದರ ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು ವರದಿಯಾಗಿದೆ. ಆರೋಪಿಗಳು ಪುತ್ತೂರಿನ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳಾಗಿದ್ದು ಎಬಿವಿಪಿ ಕಾರ್ಯಕರ್ತರೆನ್ನಲಾಗುತ್ತಿದೆ.

ತಪ್ಪು ಯಾರೇ ಮಾಡಿರಲಿ ತಪ್ಪು. ಖಂಡನಾರ್ಹ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಲೇಬೇಕು. ಅದರಲ್ಲಿ ಯಾವುದೇ ರೀತಿಯ ಪಕ್ಷಪಾತ ಅಥವಾ ಬಲ ಅಧಿಕಾರ ವರ್ಚಸ್ಸುಗಳ ಹಸ್ತಕ್ಷೇಪಕ್ಕೆ ಅವಕಾಶವಿರಬಾರದು. ವಸ್ತುನಿಷ್ಠ ಪ್ರಾಮಾಣಿಕ ನಿಷ್ಪಕ್ಷ ತನಿಖೆಯ ಮೂಲಕ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಆಗ ಕಾನೂನಿನ ಮೇಲಿನ ಜನರ ನಂಬಿಕೆ ಉಳಿಯುವುದು, ಮಾತ್ರವಲ್ಲ ವೃದ್ಧಿಸುತ್ತದೆ. ತಪ್ಪಿತಸ್ಥರಿಗೆ ಸಿಗುವ ಶಿಕ್ಷೆಯು ಮುಂದೆ ಯಾರೂ ತಪ್ಪೆಸಗದಂತೆ ಮಾಡಲು ಕಾರಣವಾಗುತ್ತದೆ.

ಇದಕ್ಕೆ ಬದಲಾಗಿ ಧರ್ಮ ಜಾತಿ ಪಕ್ಷ ಇತ್ಯಾದಿಗಳ ಆಧಾರದಲ್ಲಿ ತನ್ನವರೆಂಬ ಕಾರಣಕ್ಕಾಗಿ ತಪ್ಪು ಮಾಡುವವರನ್ನು ಬೆಂಬಲಿಸುವುದು ತಪ್ಪೇ ಆಗಿದೆ. ಅದು ಯಾರೇ ಮಾಡಲಿ ಕೋಮುವಾದವೇ ಆಗಿದೆ.‌ ತಪ್ಪನ್ನು ಕಂಡು ಮೌನ ವಹಿಸುವುದು, ತಪ್ಪೆಸಗುವವರಿಗೆ ಸಹಕಾರ ನೀಡುವುದು, ಅನ್ಯಾಯ ಮಾಡುವವರಿಗೆ ಬೆಂಬಲ ನೀಡುವುದು ಅಪರಾಧಗಳಲ್ಲಿ ಹೆಚ್ಚಳವನ್ನುಂಟು ಮಾಡುವುದು. ಇತರರ ಮನೆಗೆ ಹಚ್ಚಿದ ಬೆಂಕಿ ಕೊನೆಗೆ ತನ್ನ ಮನೆಯನ್ನೂ ಉರಿಸುವಂತೆ ಪರರಿಗೆ ಬಯಸಿದ ಕೇಡು ಕೊನೆಗೆ ತನಗೇ ಮಾರಕವಾಗಿ ಪರಿಣಮಿಸುತ್ತದೆ ಎಂಬುದು ಸತ್ಯವಾಗಿದೆ. ಇದು ವ್ಯಕ್ತಿ ಮತ್ತು ಸಮಾಜ ಎಲ್ಲದಕ್ಕೂ ಅನ್ವಯವಾಗುವ ವಿಚಾರವಾಗಿದೆ.

ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಸಮಾಜವನ್ನು ಚಿಂತೆಗೀಡು ಮಾಡಿಬಿಟ್ಟಿದೆ. ಅಪರಾಧಿಗಳಿಗೆ ಸೂಕ್ತ ಶಿಕ್ಷೆಯಾಗದಿರುವುದು ಮತ್ತು ರಾಜಾರೋಷವಾಗಿ ತಿರುಗುತ್ತಿರುವುದು ಮತ್ತೆ ಪಾಪಗಳಿಗೆ ಅವಕಾಶ ಮಾಡಿಕೊಟ್ಟಿದೆ‌. ಇಂತಹ ವಾತಾವರಣದಲ್ಲಿ ವಿಶೇಷವಾಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣದ ನಿಜವಾದ ಅರ್ಥವನ್ನು ತಿಳಿ ಹೇಳಬೇಕಾದ ಅಗತ್ಯ ಇನ್ನೂ ಹೆಚ್ಚಿದೆ. ಕೋಮುವಾದ, ಭೌತಿಕವಾದದ ಬದಲು ನೈತಿಕ ಮತ್ತು ಮಾನವೀಯ ಮೌಲ್ಯಗಳ ಅರಿವು ಮೂಡಿಸುವುದು ಕಾಲದ ಬೇಡಿಕೆಯಾಗಿದೆ. ಅದರ ವಿನಾ ಸಮಾಜವನ್ನು ಕಟ್ಟುವುದು ಬಿಡಿ, ಉಳಿಸಿಕೊಳ್ಳುವುದೂ ಕಷ್ಟವೆಂಬುದನ್ನು ಅರಿತುಕೊಳ್ಳಬೇಕಾಗಿದೆ.

ಅಮಲು ಪದಾರ್ಥಗಳ ವ್ಯಸನಕ್ಕೆ ಯುವ ಜನಾಂಗ ಬಲಿ ಬೀಳುತ್ತಿದ್ದು ಪುತ್ತೂರಿನ ಘಟನೆಯಲ್ಲಿ ಅಮಲು ಪದಾರ್ಥ ಬಹುಮುಖ್ಯ ಪಾತ್ರ ವಹಿಸಿರುವುದು ಎದ್ದು ಕಾಣುತ್ತಿದೆ. ಅಮಲು ಜನರನ್ನು ಎಷ್ಟು ಅಪಾಯಕಾರಿ ಮಟ್ಟಕ್ಕೆ ತಂದು ಮುಟ್ಟಿಸಿದೆ ಎಂಬುದಕ್ಕೆ ಇತ್ತೀಚೆಗಷ್ಟೆ ಮಂಗಳೂರಿನಲ್ಲಿ ನಡೆದ ಪಾಗಲ್ ಪ್ರೇಮಿಯ ಚೂರಿ ಇರಿತ ಪ್ರಕರಣ ಒಂದು ಉದಾಹರಣೆಯಷ್ಟೆ. ಆದ್ದರಿಂದ ಅಮಲು ಪದಾರ್ಥಗಳನ್ನು ಮಟ್ಟ ಹಾಕುವ ದಿಸೆಯಲ್ಲಿ ಪೋಲಿಸ್ ಇಲಾಖೆ ಇನ್ನೂ ಸಕ್ರಿಯಗೊಳ್ಳಬೇಕಾದ ಅಗತ್ಯವಿದೆ. ಶಿಕ್ಷಣ ಸಂಸ್ಥೆಗಳು ಹಾಗೂ ಸೇವಾ ಸಂಸ್ಥೆಗಳು ಅಮಲು ಪದಾರ್ಥಗಳ ವಿರುದ್ಧ ವಿದ್ಯಾರ್ಥಿ ಯುವಕರಲ್ಲಿ ಹೆಚ್ಚಿನ ಜಾಗೃತಿಯನ್ನು ಮೂಡಿಸಬೇಕಾದ ಅಗತ್ಯವನ್ನು ಮರುಕಳಿಸುತ್ತಿರುವ ಅಮಾನವೀಯ ಘಟನೆಗಳು ಮತ್ತೆ ಮತ್ತೆ ಒತ್ತಿ ಹೇಳುತ್ತಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.