ಲೇಖಕರು: ಸ್ವಾಲಿಹ್ ತೋಡಾರ್
ಕಷ್ಟ ಯಾರಿಗಿರಲ್ಲ ಹೇಳಿ?
ಹಾಗಂತ ಬಹಳ ಜನ ಹೇಳುವುದನ್ನು ನೀವು ಕೇಳಿರಬಹುದು. ನನ್ನ ಕಷ್ಟ ನಿನಗೆ ಬಂದಿದ್ದರೆ ನೀನು ಹೀಗೆ ಹೇಳುತ್ತಲೇ ಇರಲಿಲ್ಲ ಅಂತ ಅವರ ಮಾತನ್ನು ಒಪ್ಪಿಕೊಳ್ಳದೆ ನೀವೂ ಅವರಿಗೆ ಉತ್ತರಿಸಿರಬಹುದು. ಎರಡೂ ನಿಜವೇ! ಕಷ್ಟ ಎಲ್ಲರಿಗೂ ಬರುತ್ತೆ ಅನ್ನೋ ಅವರ ಮಾತು ಹಾಗೂ ನನ್ನ ಕಷ್ಟ ನಿನಗೆ ಬಂದಿದ್ದರೆ ನೀನು ಹೀಗೆ ಹೇಳುತ್ತಿರಲಿಲ್ಲ ಅನ್ನೋ ನಿಮ್ಮ ಮಾತು ಎರಡು `ಎರಡು ಕಡೆ’ಯ ನಿಜಗಳು ಅಷ್ಟೆ. ಇನ್ನೊಬ್ಬರನ್ನು ಸಮಾಧಾನಿಸುತ್ತಾ ಅವರ ಮಾತನ್ನು ನೀವೂ, ನಿಮ್ಮ ಮಾತನ್ನು ಅವರೂ ಹೇಳಬಹುದಾದ ಸಂದರ್ಭಗಳೂ ಬಂದಿರಬಹುದು. ಇದು ಬದುಕಲ್ಲವೇ? ಇಲ್ಲಿ ಪಾತ್ರ ಬದಲಾವಣೆಗಳು ಸಹಜ.
ನನಗೆ ಇಂಟರೆಸ್ಟಿಂಗ್ ಅನ್ನಿಸಿದ್ದು; ಒಂದು ಆಟೋದ ಹಿಂದೆ `ಗಂಡಸರು ಅಳೋದು ತಪ್ಪಲ್ಲ, ಹೆಂಗಸರು ನಗೋದು ತಪ್ಪಲ್ಲ’ ಎಂಬೊಂದು ಬರಹವನ್ನು ಓದಿದಾಗ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಗಂಡಸರೂ ಸಹ ಅಳಬಹುದು. ಅದು ತಪ್ಪೇನೂ ಅಲ್ಲ ಎಂದೋ ಅಥವಾ ಗಂಡಸರಿಗೆ ಅಳು ಎಂಬುದು ಕಟ್ಟಿಟ್ಟ ಬುತ್ತಿ. ಈ ಬದುಕಲ್ಲಂತೂ ಅವರು ಅದರಿಂದ ತಪ್ಪಿಸಿಕೊಂಡು ಹೋಗುವುದು ಸಾಧ್ಯವೇ ಇಲ್ಲ ಅಂತಾನಾ? ಹಾಗಂತ ಒಂದು ದಿನ ಹೊಂಚಿ ಹಾಕಿ ಕೂತು ಆ ಆಟೋ ಚಾಲಕನನ್ನೇ ಕೇಳಿ ಬಿಟ್ಟೆ.
`ಹೇಗೂ ಅರ್ಥೈಸಬಹುದು. ಎಲ್ಲವೂ ಅವರವರ ಭಾವ ಭಕುತಿಗೆ ಬಿಟ್ಟ ವಿಚಾರ ಸಾರ್’ ಎಂದು ಆತ ಹೇಳಿದಾಗ ತಟ್ಟನೇ ನನ್ನಲ್ಲೊಂದು ಪ್ರಶ್ನೆ ಉದಿಸಿತು.
`ನೀವು ಎಂದಾದರೂ ಅತ್ತಿದ್ದೀರಾ?’ ಕುತೂಹಲದಿಂದ ಕೇಳಿದೆ.
ಚಾಲಕ ನಗು ನಗುತಾ ಹೇಳಿದ. `ದಿನನಿತ್ಯ ಅಳುತ್ತಿದ್ದೇನೆ ಸಾರ್. ಅಳದ ಗಂಡಸಲ್ಲಿ ಇಂತಹ ಮಾತುಗಳು ಹುಟ್ಟಲು ಸಾಧ್ಯನಾ? ನಾವು ನೀವು ಬರೆಯೋದೆಲ್ಲಾ ನಮ್ಮ ನಮ್ಮ ಅನುಭವನೇ ಅಲ್ವಾ ಸಾರ್’
`ಅದು ನಿಜನೇ, ಆದರೆ, ದಿನನಿತ್ಯ ಯಾಕೆ ಅಳಬೇಕು? ಅಂತಹದ್ದೇನಾಗಿದೆ ನಿಮಗೆ?’
`ಸಾರ್, ನೀವು ಕಥೆ ಕೇಳುವ ಮೂಡಲ್ಲಿರುವ ಹಾಗಿದೆ’ ಎಂದು ಆತ ಮತ್ತೆ ನಕ್ಕು ಬಿಟ್ಟ.
`ಕಥೆ ಅಂತಲ್ಲ.. ನನಗೆ ಜೀವನ ಅಂದರೆ ತುಂಬಾ ಇಷ್ಟ. ಒಬ್ಬರ ಕಷ್ಟ ಸುಖಗಳನ್ನು ನಾವು ಕೇಳಿ ತಿಳಿದುಕೊಂಡರೆ, ಹೇಳಿದವರಿಗೆ ತಮ್ಮ ಮನಸಿನ ಭಾರ ಹಂಚಿಕೊಂಡ ನೆಮ್ಮದಿಯ ಜೊತೆಗೆ ನಮ್ಮಂತಹ ಪಾಮರರಿಗೆ ಈ ಲೋಕ, ಲೋಕದ ಜನರನ್ನು ಸ್ವಲ್ಪ ಮಟ್ಟಿಗೆ ತಿಳಿದುಕೊಂಡಂತಾಗುತ್ತದೆ ಅನ್ನೋ ನಂಬಿಕೆ ನನ್ನದು. ನಿಮಗೆ ಇಷ್ಟವಿಲ್ಲದಿದ್ದರೆ ಹೇಳಬೇಡಿ’
`ಹಾಗೇನೂ ಇಲ್ಲ ಸಾರ್. ಸದ್ಯಕ್ಕೆ ನನಗೇನೂ ಕೆಲಸ ಇಲ್ಲ. ಯಾರಾದರು ಆಟೋ ಬಾಡಿಗೆಗೆ ಕರೆಯುವವರೆಗೂ ಹೇಳ್ತಿನಿ. ಆದ್ದರಿಂದ ನನ್ನ ಕಥೆಯನ್ನು ಪೂರ್ತಿಯಾಗಿ ಹೇಳ್ತಿನಿ ಅನ್ನೋ ಭರವಸೆ ನಾನು ನೀಡಲಾಗುವುದಿಲ್ಲ’
`ಬೇಡ. ನಿಮ್ಮಿಂದ ಎಷ್ಟು ಸಾಧ್ಯನೋ ಅಷ್ಟು ಹೇಳಿ’
`ಸಾರ್, ನಿಮಗೆ ಒಬ್ಬ ವ್ಯಕ್ತಿ ಯಾಕೆ ಅಳ್ತಾನೆ ಅನ್ನೋದು ತಿಳಿಯಬೇಕಾದರೆ ಒಂದಿಡೀ ದಿನ ನೀವು ನಮ್ಮಂತ ದರಿದ್ರರ ಜೊತೆ ಕಳೆಯಬೇಕು. ಆಗ ನಾವು ಯಾಕೆ ಅಳುತ್ತೇವೆ ಅನ್ನೋದು ನಿಮಗೂ ಗೊತ್ತಾಗುತ್ತೆ. ಉದಾಹರಣೆಗೆ ನನ್ನ ಕಥೆಯನ್ನೇ ಹೇಳುತ್ತೇನೆ ಕೇಳಿ’
`ನಾನು ತುಂಬಾ ಬಡಕುಟುಂಬದಲ್ಲಿ ಹುಟ್ಟಿದವನು. ಈ ಭೂಮಿಯ ಮೇಲೆ ಕಾಲಿಡುವ ಮುಂಚೆಯೇ ಅಪ್ಪ ಈ ಭೂಮಿಯನ್ನು ಬಿಟ್ಟು ಹೋಗಿದ್ದ. ನನಗೆ ಇಬ್ಬರು ಅಕ್ಕಂದಿರಿದ್ದರು.  ನಮ್ಮ ಹಸಿವನ್ನು ನೀಗಿಸುವುದರ ಜೊತೆಗೆ ಅವರ ಮದುವೆಯೂ ಅಮ್ಮನ ಪಾಲಿನ ಸವಾಲಾಗಿತ್ತು. ಆಚೀಚಿನ ಮನೆಯ ಮುಸುರೆ ತಿಕ್ಕಿ ಅಮ್ಮ ನಮ್ಮ ಹಸಿವನ್ನು ನೀಗಿಸುತ್ತಿದ್ದರು. ಆದರೆ, ಅಕ್ಕಂದಿರ ಮದುವೆ ಹೇಗೆ ಮಾಡುವುದು ಎಂಬುದೇ ಅಮ್ಮನ ಬಹುದೊಡ್ಡ ತಲೆ ನೋವಾಗಿತ್ತು. ಕೈಯಲ್ಲಿ ನಯಾಪೈಸೆಯಿಲ್ಲದೆ, ಮೈಮೇಲೆ ತುಂಡು ಬಂಗಾರವಿಲ್ಲದೆ, ಈ ಸಮಾಜ ಬಯಸುವ ಬಿಳಿಯ ಬಣ್ಣವಿಲ್ಲದೆ ಒಬ್ಬ ಹೆಣ್ಣನ್ನು ಅಷ್ಟು ಸುಲಭದಲ್ಲಿ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವುದು ಸಾಧ್ಯವೇ? ಇಲ್ಲ ತಾನೇ? ಆದ್ದರಿಂದ ಅಮ್ಮ ಸಹಾಯಕ್ಕಾಗಿ ಸಂಬಂಧಿಕರ ಮನೆಗೆ ಅಲೆದಾಡ ತೊಡಗಿದರು. ಯಾರೂ ತಿರುಗಿ ಕೂಡ ನೋಡಲಿಲ್ಲ. ಎಲ್ಲರಿಗೂ ಒಂದೊಂದು ಕಷ್ಟ. ಸಬೂಬುಗಳ ಮೇಲೆ ಸಬೂಬುಗಳು. ಸಂಬಂಧಿಕರಿಂದ ಏನೂ ಪ್ರಯೋಜನವಿಲ್ಲವೆಂದು ಅರಿತ ಮೇಲೆ ಅಮ್ಮ ಸಮುದಾಯದ ನಾಯಕರ ಮನೆಗೆ ಅಲೆದಾಡಲಾರಂಭಿಸಿದರು. ಹೋದಾಗಲೆಲ್ಲಾ ಈ ನಾಯಕರು ಹತ್ತು ಇಪ್ಪತ್ತು ಎಂದು ಬಿಕ್ಷೆ ನೀಡುತ್ತಿದ್ದರೆ ವಿನಾ ಬೇರೆ ಯಾವ ಜವಾಬ್ದಾರಿಯನ್ನೂ ಹೊತ್ತು ಕೊಳ್ಳಲಿಲ್ಲ. ಸಂಘಟನೆಯವರೂ ಸಹ ನೋಡೋಣ ನೋಡೋಣ ಎನ್ನುತ್ತಲೇ ದೂರವಾಗುತ್ತಿದ್ದರು. ಪ್ರತೀ ನಿತ್ಯ ಅಮ್ಮ ಅಳುತ್ತಾ ಮನೆಯ ಹೊಸಿಲು ದಾಟುವುದನ್ನು ನಾನು ನೋಡುತ್ತಿದ್ದೆ. ಆಗ ನನಗಿನ್ನೂ ಹದಿನೈದು ವಯಸು. ಹೀಗಿರಲು ಒಂದು ದಿನ ನನ್ನ ದೊಡ್ಡಕ್ಕ ಯಾರದೋ ಜೊತೆಗೆ ಓಡಿ ಹೋದಳು. ಆ ದಿನ ಅಮ್ಮ ಒಂದೇ ಒಂದು ಅಕ್ಷರವೂ ಮಾತನಾಡಲಿಲ್ಲ. ಅಳಲೂ ಇಲ್ಲ. ನಗಲೂ ಇಲ್ಲ. ಸುಮ್ಮನೆ ಕಲ್ಲು ಬಂಡೆಯಂತೆ ಕೂತಿದ್ದಳು’’
“ಆಗ ನೋಡಬೇಕಿತ್ತು. ಬುದ್ಧಿ ಹೇಳಲು ಎಷ್ಟು ಮಂದಿಯಿದ್ದರು. ಬಂಧು ಬಳಗದ ಜನರು, ಸಮುದಾಯದ ನಾಯಕರು ಮನೆಗೆ ಬಂದು ಅಮ್ಮನಿಗೆ ತಾರಾಮಾರ ಬೈದು ಹೋದರು. ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಸಾಕಿದ್ದರೆ ಇದೆಲ್ಲಾ ಸಂಭವಿಸುತ್ತಿತ್ತೇ? ಆಗಲೇ ಯೋಚಿಸಬೇಕಿತ್ತು. ಈಗ ಅತ್ತು ಏನು ಪ್ರಯೋಜನ? ಎಂದು ಒಬ್ಬ ಬಂಧು ಹೇಳಿದಾಗ ನಮಗೆಲ್ಲಾ ಆಶ್ಚರ್ಯವಾಗುವಂತೆ ಅಮ್ಮ ಎದ್ದು ನಿಂತು ಹೇಳಿದರು, `ಸರಿ, ನಾನು ಅಳುವುದಿಲ್ಲ. ನಗುತ್ತೇನೆ. ಆಗಬಹುದಾ, ಆಗಬಹುದಾ?’ ಎಂದು ಜೋರಾಗಿ ನಗಲಾರಂಭಿಸಿದರು. ಅಂದು ನಗಲು ಆರಂಭಿಸಿದ ಅಮ್ಮ ನಗುವುದನ್ನು ಇನ್ನೂ ನಿಲ್ಲಿಸಿಲ್ಲ’
`ಅಂದರೆ…?’ ನಾನು ಅರ್ಥವಾಗದೆ ಕೇಳಿದೆ.
`ಅದೇ ನೀವೆಲ್ಲಾ ಹೇಳುತ್ತೀರಲ್ಲಾ ಸಾರ್, ಹುಚ್ಚು ಅಂತ..ಅದೇ ಸಾರ್, ಅದು ನಮ್ಮ ಅಮ್ಮನನ್ನು ಹಿಡಿದು ಬಿಟ್ಟಿತು’ ಎಂದವನೇ ಬಿಕ್ಕಿ ಬಿಕ್ಕಿ ಅಳತೊಡಗಿದ. ಅವನನ್ನು ಹೇಗೆ ಸಮಾಧಾನಿಸುವುದೆಂದೇ ತಿಳಿಯದೆ; `ಛೇ, ಗಂಡಸರಾಗಿ ಅಳುತ್ತಿದ್ದೀರಲ್ಲಾ…’ ನಾನು ಬಾಯಿ ತಪ್ಪಿ ಕೇಳಿಬಿಟ್ಟೆ. ಗಂಡಸರು ಅತ್ತರೇನು ತಪ್ಪು? ಅಂತ ನನಗೆ ಆನಂತರ ಹೊಳೆಯಿತು.
`ಹೌದು. ಸಾರ್, ಕಳೆದ ಇಪ್ಪತ್ತೈದು ವರ್ಷಗಳಿಂದ ನಮ್ಮ ಅಮ್ಮ ಚಿಂದಿ ಸೀರೆಯುಟ್ಟು, ಮನೆಗೂ ಬರದೆ, ತಮ್ಮಷ್ಟಕ್ಕೇ ಮಾತನಾಡಿಕೊಳ್ಳುತ್ತಾ, ಗಹಗಹಿಸಿ ನಗುತ್ತಾ ಇದೇ ಬೀದಿಯಲ್ಲಿ ಅವರಿವರಿಂದ ಹುಚ್ಚಿ ಎಂದು ಕರೆಸಿಕೊಳ್ಳುತ್ತಾ ಓಡಾಡುತ್ತಿರುವುದನ್ನು ಕಣ್ಣಾರೆ ಕಾಣುತ್ತಿದ್ದೇನೆ ಸಾರ್. ಪ್ರತೀ ದಿನ ಸಂಜೆ ಮನೆಗೆ ಎಳೆದುಕೊಂಡು ಬಂದು ಕೂಡಿ ಹಾಕುತ್ತೇನೆ. ಆದರೆ, ಮರುದಿನ ಬೆಳಕು ಹರಿಯುತ್ತಿದ್ದಂತೆ ಅದು ಹೇಗೋ ಆಕೆ ತಪ್ಪಿಸಿಕೊಂಡು ಹೋಗುತ್ತಿದ್ದಳು. ಒಂದು ದಿನ ಯಾರೋ ಹೇಳಿದರೆಂದು ಸಂಕೋಲೆಯಲ್ಲಿ ಕಟ್ಟಿ ಹಾಕಿದೆ. ರಾತ್ರಿ ಬಂದು ನೋಡುತ್ತೇನೆ, ಸಂಕೋಲೆಯ ಬಿಗಿಗೆ ಅಮ್ಮನ ಮಣಿಗಂಟಿನ ಸುತ್ತ ರಕ್ತ ಹೆಪ್ಪುಗಟ್ಟಿಬಿಟ್ಟಿದೆ. ಅಮ್ಮ, ನನ್ನನ್ನು ಕರೆದು ಪುಟ್ಟ ಮಗುವಿನಂತೆ ಮಣಿಗಂಟನ್ನು ತೋರಿಸಿದರು. `ಇಲ್ಲಿ ನೋಡು ಏನಾಗಿದೆಯಂಥ, ರಕ್ತ ಬರುತ್ತಿದೆಯಲ್ವಾ? ಈ ಕಟ್ಟು ಬಿಚ್ಚಿ ಬಿಡ್ತಿಯಾ, ತುಂಬಾ ನೋವಾಗ್ತಿದೆ. ಇನ್ನು ಮೇಲೆ ಎಲ್ಲಿಗೂ ಹೋಗುವುದಿಲ್ಲ. ಬೇಕಾದರೆ ಗೀತಕ್ಕನ ಮನೆಯವರೆಗೂ ಹೋಗಿ ಬರುತ್ತೇನೆ. ಅದರಾಚೆಗೆ ಎಲ್ಲಿಗೂ ಹೋಗುವುದಿಲ್ಲ ಸತ್ಯ. ಈ ಕಟ್ಟೊಂದನ್ನು ಬಿಚ್ಚಿ ಬಿಡ್ತಿಯಾ?’’
 ಅದೇ ಕೊನೆ ಸಾರ್, ಆ ನಂತರ ಎಂದೂ ಅಮ್ಮನನ್ನು ನಾನು ಸಂಕೋಲೆಯಿಂದ ಕಟ್ಟಿ ಹಾಕಲಿಲ್ಲ. ನಾನೆಷ್ಟೊಂದು ಕಟುಕ ಸಾರ್. ಹೆತ್ತ ಅಮ್ಮನನ್ನು ಸಂಕೋಲೆಯಲ್ಲಿ ಕಟ್ಟಿ ಹಾಕಿ ಬಿಟ್ಟಿದ್ದೆ. ಅವತ್ತೇ ಡಿಸೈಡ್ ಮಾಡಿದೆ. ಏನೇ ಆಗಲಿ, ಇನ್ನು ಮುಂದೆ ಅಮ್ಮನನ್ನು ಕಟ್ಟಿ ಹಾಕುವುದಿಲ್ಲ. ಜನರು ಏನು ಬೇಕಾದರೂ ಹೇಳಲಿ. ನಾನು ಮಾತ್ರ ಅವಳನ್ನು ಕಟ್ಟಿ ಹಾಕಲಾರೆ. ಎಷ್ಟು ಕಷ್ಟಪಟ್ಟಿದ್ದಳು ಸಾರ್ ನಮ್ಮನ್ನೆಲ್ಲಾ ಸಾಕಿ ಬೆಳೆಸಲು. ಮುಸುರೆ ತಿಕ್ಕುತ್ತಾ ಎಷ್ಟು ಬೈಗುಳ ತಿಂದಿದ್ದಳು. ಏನೇನೆಲ್ಲಾ ಕೇಳಬಾರದ್ದನ್ನು ಕೇಳಿದ್ದಳು. ತಾನು ತಿನ್ನದೆ ನಮಗೆ ತಿನ್ನು ತಿನ್ನು ಎಂದು ದುಂಬಾಲು ಬೀಳುತ್ತಿದ್ದಳು.ಎಲ್ಲವೂ ನಮಗಾಗಿ ತಾನೆ? ನಮ್ಮ ಏಳಿಗೆಗಾಗಿ ತಾನೆ? ನಾನು ಏನು ಮಾಡಲಿ ಸಾರ್? ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡುವ ದುಡ್ಡು ನನ್ನ ಬಳಿಯಿಲ್ಲ. ಸಣ್ಣಪುಟ್ಟ ವೈದ್ಯರ ಬಳಿಗೆ ಹೋದಾಗಲೆಲ್ಲಾ ಇದು ಚಿಕಿತ್ಸೆಯಿಂದ ಸರಿಯಾಗುವುದಿಲ್ಲ ಎನ್ನುತ್ತಾರೆ. ನನಗೊಂದು ತಿಳಿಯುವುದಿಲ್ಲ ಸಾರ್, ರಾತ್ರಿಯಿಡೀ ಈ ಆಟೋದೊಳಗೆ ಬಿಕ್ಕಿ ಬಿಕ್ಕಿ ಅಳುವುದಲ್ಲದೆ…’’
“ನಾನು ಅಳುವುದನ್ನು ಕಂಡು ಇತರ ಆಟೋದವರು ನೀವು ಕೇಳಿದ ಪ್ರಶ್ನೆಯನ್ನೇ ಕೇಳುತ್ತಿದ್ದರು. ಗಂಡಸಾಗಿ ಅಳುವುದೇ? ಎಂದು. ಅದಕ್ಕೇ ಈ ಆಟೋದ ಹಿಂದೆ `ಗಂಡಸರು ಅಳುವುದು ತಪ್ಪಲ್ಲ..’ಎಂದು ಬರೆದು ಹಾಕಿದೆ. ಬರಿಯ ನನ್ನ ಸಮರ್ಥನೆ ಮಾತ್ರ ಬೇಡ ಎಂದು ಅದಕ್ಕೆ ಸೂಟಾಗುವ ಹಾಗೆ ಹೆಂಗಸರು ನಗೋದು ತಪ್ಪಲ್ಲ ಎಂದೂ ಸೇರಿದೆ. ನೀವೇ ಹೇಳಿ ಸಾರ್? ನಾನು ಅಳೋದು ತಪ್ಪಾ? ಅಳುವ ಸ್ವಾತಂತ್ರನೂ ನನಗಿಲ್ಲವಾ? ಈ ಅಳು ನನಗೆ ನಾಳೆ ಮೈಮುರಿದು ದುಡಿಯೋ ಶಕ್ತಿ ಕೊಡುತ್ತೆ ಸಾರ್. ಚಿಂತೆಗಳ, ನೋವಿನ ಭಾರದಿಂದ ನನ್ನನ್ನು ಕನಿಷ್ಠ ಪಕ್ಷ ಒಂದು ದಿನದ ಮಟ್ಟಿಗಾದರೂ ಮುಕ್ತಗೊಳಿಸುತ್ತೆ ಸಾರ್. ನಾನು ಅಳುವುದು ನನ್ನ ಆತ್ಮಶಾಂತಿಗಾಗಿ ಸಾರ್, ಅಳುತ್ತಾ ದಿನಕ್ಕೆ ಐದು ಬಾರಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತೇನೆ. ಅದರಿಂದ ನನಗೆ ಒಂದಿಷ್ಟು ನೆಮ್ಮದಿ ಸಿಗುತ್ತದೆ. ಇಲ್ಲಿನ ಕಷ್ಟಗಳನ್ನು ತಾಳ್ಮೆಯಿಂದ ಎದುರಿಸಿದರೆ ಕನಿಷ್ಠ ಪಕ್ಷ ಪರಲೋಕದಲ್ಲಾದರೂ ನೆಮ್ಮದಿ ಸಿಗಬಹುದೆಂಬ ನಂಬಿಕೆ ಸಾರ್ ನನ್ನದು. ನಾಸ್ತಿಕರಿಗಿದು ಮುಗ್ಧ ನಂಬಿಕೆ ಅಥವಾ ಮೂಢನಂಬಿಕೆ ಅನಿಸಬಹುದು. ಆದರೆ, ನಾನಿವತ್ತು ಜೀವಿಸಿದ್ದರೆ ಅದಕ್ಕೆ ಈ ನಂಬಿಕೆಯೇ ಮುಖ್ಯಕಾರಣ ಸಾರ್. ನಂಬಿಕೆಯ ಜೊತೆಗೆ ನೋವುಗಳನ್ನೆಲ್ಲಾ ಹೊರ ಹಾಕಲು ಸಹಾಯ ಮಾಡುವ ಅಳು ಜೊತೆಗಿರುವುದು ದೊಡ್ಡ ನೆಮ್ಮದಿ ಸಾರ್,.  ಆ ಅಳುವೊಂದು ಇಲ್ಲದಿರುತ್ತಿದ್ದರೆ ಇಂದು ಅಮ್ಮನ ಹಾಗೆ ನಾನೂ ಸಹ ಹುಚ್ಚನಾಗಿ ಅಳೆಯಬೇಕಿತ್ತು. ಆಗ ನನ್ನ ಎರಡನೇ ಅಕ್ಕನೂ ಹೇಳದೆ ಕೇಳದೆ ಯಾರೊಂದಿಗಾದರು ಓಡಿ ಹೋಗಬೇಕಾಗುತಿತ್ತು ಅಥವಾ ಹುಚ್ಚಿಯಾಗಿ ಅಲೆದಾಡಬೇಕಾಗಿತ್ತು ಅಲ್ಲವೇ ಸಾರ್? ಇಲ್ಲ. ನಾನದಕ್ಕೆ ಅವಕಾಶ ನೀಡಲಿಲ್ಲ. ಮೈಮುರಿದು ದುಡಿದು, ಯಾರ ಹಂಗೂ ಇಲ್ಲದೆ ಅವಳಿಗೆ ಇಷ್ಟವಾದ ಗಂಡಿನ ಜೊತೆಗೆ ಮದುವೆ ಮಾಡಿ ಕಳುಹಿಸಿಕೊಟ್ಟೆ. ಈಗವಳು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾಳೆ. ಆಗಾಗ್ಗೆ ಮನೆಗೆ ಬಂದು ಅಮ್ಮನನ್ನು ನೋಡಿಕೊಂಡು ಹೋಗುತ್ತಾಳೆ’
`ನಿಮ್ಮ ಮದುವೆ?’
`ನಮಗೇಕೆ ಸಾರ್ ಮದುವೆ. ಈಗಂತೂ ವಯಸು ನಲ್ವತ್ತು ಆಗುತ್ತಾ ಬಂತು. ಮದುವೆಯಾದರೆ  ನನ್ನ ಅಮ್ಮನನ್ನು ನೋಡಿಕೊಳ್ಳುವವರು ಯಾರು ಸಾರ್? ಸುಖ, ಶಾಂತಿಯನ್ನು ಬಯಸಿ ನಮ್ಮ ಮನೆಗೆ ಬರುವ ಹುಡುಗಿಗೇಕೆ ಸಾರ್ ಈ ಕಷ್ಟಗಳೆಲ್ಲಾ ಅಂತ ಅನಿಸಿ ಮದುವೆ ಮಾಡಿಕೊಳ್ಳೋದೇ ಬೇಡ ಅಂದುಕೊಂಡೆ. ಅಷ್ಟೇ ಅಲ್ಲದೆ, ಮದುವೆಯಾದರೆ ಈಗಿನಂತೆ ಅಮ್ಮನನ್ನು ನೋಡಿಕೊಳ್ಳೋದೂ ಕೂಡ ಸಾಧ್ಯವಾಗಲ್ಲ ಅನಿಸಿತು. ಅವಳು ಬೇರೆ ಮನೆ ಮಾಡೋಣÀ, ಇಲ್ಲಿಂದ ದೂರ ಹೋಗೋಣ. ಅಮ್ಮನನ್ನು ಹುಚ್ಚಾಸ್ಪತ್ರೆಗೆ ಸೇರಿಸಿ, ಈ ಅಮ್ಮನಿಂದಾಗಿ ನನಗೆ ಬೀದಿಗಿಳಿಯಲೂ ಭಯ ಅನ್ನಲಾರಂಭಿಸಿದರೆ ಆಮೇಲೆ ನಮ್ಮ ಸಂಸಾರದ ನೆಮ್ಮದಿ ಕೆಟ್ಟು ಹೋಗೋದರಲ್ಲಿ ಸಂಶಯವೇ ಇಲ್ಲ ಸಾರ್. ಆದ್ದರಿಂದ ಈ ಎಲ್ಲಾ ರಗಳೆಯೇ ಬೇಡವೆಂದು ಮದುವೆಯಾಗದೆಯೇ ಉಳಿದುಕೊಂಡಿದ್ದೇನೆ’
ಅಷ್ಟರಲ್ಲಿ ಯಾರೋ ಬಾಡಿಗೆಗೆ ಕರೆದರು. ಆಟೋ ಚಾಲಕ `ಹೊಟ್ಟೆಪಾಡು. ಹೋಗಲೇಬೇಕು. ಬರ್ತೀನಿ ಸಾರ್. ನನ್ನ ಗೋಳುಗಳನ್ನು ಹೇಳಿ ನಿಮಗೆ ತೊಂದರೆ ಕೊಟ್ಟೆ ಅನಿಸುತ್ತೆ. ಕ್ಷಮಿಸಿï’ ಎಂದು ಆಟೋ ಚಾಲು ಮಾಡಿ ನಗುತ್ತಾ ಹೊರಟು ಹೋದ. ಅವನ ನಗುವಿನ ಹಿಂದೆ ಅಳುವಿನ ಛಾಯೆಯಿರುವುದು ನನಗೆ ಸ್ಪಷ್ಟವಾಗಿ ತಿಳಿಯುತಿತ್ತು.
ಹಿಂದಿರುಗುತ್ತಾ ಯೋಚಿಸಿದೆ;
ಈ ಲೋಕದಲ್ಲಿ ಅದೆಷ್ಟು ಗಂಡಸರು ಹೀಗೆ ಅಳುತ್ತಿದ್ದಾರೋ? ತ್ಯಾಗ, ಸಹನೆ ಮತ್ತು ಪ್ರೀತಿಗೆ ಗಂಡು ಹೆಣ್ಣೆಂಬ ವ್ಯತ್ಯಾಸವಿರುವುದಿಲ್ಲ. ಹೆಣ್ಣಿನಂತೆ ಗಂಡೂ ಸಹ ತ್ಯಾಗ ಮಾಡಬಲ್ಲ, ತನ್ನ ಕುಟುಂಬವನ್ನು ಪ್ರೀತಿಸಬಲ್ಲ ಮತ್ತು ನಿಸ್ವಾರ್ಥತೆಯ ಜೀವನ ನಡೆಸಬಲ್ಲ ಎಂಬುದಕ್ಕೆ ಈ ಆಟೋ ಚಾಲಕನೇ ಸಾಕ್ಷಿ. ಅಷ್ಟೆಲ್ಲಾ ಕಷ್ಟವಿದ್ದರೂ, ಮನಸಿನ ನೋವು ಅಷ್ಟು ಹಿರಿದಾಗಿದ್ದರೂ ಆತ ದುಡಿಯುವುದನ್ನು ಬಿಡಲಿಲ್ಲ. ಸಾಯೋದೇ ಲೇಸೆಂದು ಆತ್ಮಹತ್ಯೆಗೆ ಪ್ರಯತ್ನಿಸಲಿಲ್ಲ. ಅವನ ಬದುಕುವ ಛಲ, ಆತ್ಮವಿಶ್ವಾಸ ದೊಡ್ಡದಲ್ವೇ?

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.