ಉಡುಪಿ/ಚಿಕ್ಕಮಗಳೂರು: 2019 ರ ಚುನಾವಣೆ ಹತ್ತಿರ ಬರುತ್ತಿರುವಾಗಲೇ ಅಭ್ಯರ್ಥಿಗಳ ಲೆಕ್ಕಚಾರ ಜೋರಾಗಿಯೇ ನಡೆಯುತ್ತಿದೆ. ಕರಾವಳಿಯ ಕ್ಷೇತ್ರಗಳು ಇದರ ಹೊರತಾಗಿಲ್ಲ. ಕಾಂಗ್ರೆಸ್ – ಬಿಜೆಪಿ ಪೈಪೋಟಿಗೆ ಸರ್ವ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಮತ್ತೊಂದು ಕಡೆ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಎಲ್ಲ ತಯಾರಿ ಕೂಡ ನಡೆಯುತ್ತಿದೆ.

ಈತನ್ಮಧ್ಯೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಯುವ ಅಭ್ಯರ್ಥಿ ಅಮೃತ್ ಶೆಣೈ ಸ್ಪರ್ಧಿಸುವುದು ಬಹುತೇಕ ಖಚಿತವೆಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಜಯ ಪ್ರಕಾಶ್ ಹೆಗ್ಡೆಯವರನ್ನು ಬರೊಬ್ಬರಿ ಲಕ್ಷ ಮತಗಳಿಂದ ಸೋಲಿಸಿ ಗೆದ್ದಿದ್ದ ಶೋಭಾ ಕರಂದ್ಲಾಜೆ ಮತದಾರರ ಭರವಸೆಯನ್ನು ಪೂರ್ತಿಗೊಳಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದರು.ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ಅಪರೂಪಕ್ಕೊಮ್ಮೆ ಕಾಣ ಸಿಗುತ್ತಿದ್ದ ಸಂಸದೆ ಶೋಭಾ ಈ ಬಾರಿ ಕ್ಷೇತ್ರದ ಮತದಾರರ ಕೆಂಗಣ್ಣಿಗೆ ಗುರಿಯಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಮತ ಹಾಕುವುದಿದ್ದರೆ, ಕ್ಷೇತ್ರದಲ್ಲಿ ಲಭ್ಯವಿದ್ದು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಮಾತ್ರ ಎಂಬ ಬಿಸಿ ಬಿಸಿ ಚರ್ಚೆ ಸಾರ್ವಜನಿಕ ವಲಯದಲ್ಲಿ ಹರಿದಾಡ ತೊಡಗಿದೆ.

ಈ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿರುವುದು ಸುಳ್ಳಲ್ಲ. ಈ ಬಾರಿ ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ಜನಪ್ರಿಯವಾಗಿರುವ ಅಮೃತ್ ಶೆಣೈರವರನ್ನು ಕಣಕ್ಕಳಿಸುವ ಸಾಧ್ಯತೆ ಕಂಡು ಬರುತ್ತಿದೆ. ಈಗಾಗಲೇ ಪಕ್ಷ ಬೇಧ ಮರೆತು ಈ ಬಾರಿ ಅಮೃತ್ ಶೆಣೈಗೆ ಸಾಮಾಜಿಕ ಜಾಲಾತಾಣದಲ್ಲಿ ಬೆಂಬಲದ ಮಹಾಪೂರ ಹರಿದು ಬರುತ್ತಿದೆ.

ಪ್ರಬಲ ಜಾತ್ಯತೀತ ಕುಟುಂಬದಿಂದ ಬಂದಿರುವ ಅಮೃತ್ ಶೆಣೈ ಪ್ರಸ್ತುತ ಎಲ್ಲ ಧರ್ಮೀಯರೊಂದಿಗೆ ಬೆರೆತು ಮುಂದೆ ಸಾಗುವುದರಲ್ಲಿ ಎತ್ತಿದ ಕೈ ಎಂದೆನಿಸಿಕೊಂಡಿದ್ದಾರೆ. ರಾಜಕೀಯ ಹಿನ್ನಲೆಯ ಕುಟುಂಬದಿಂದ ಬಂದಿರುವ ಅಮೃತ್ ಶೆಣೈ ದೊಡ್ಡಪ್ಪ ದಿವಂಗತ ರಂಗನಾಥ್ ಶೆಣೈ 1971 ರಲ್ಲಿ ಸಂಸದರಾಗಿ ಚುನಾಯಿತರಾಗಿದ್ದರು. ಇಂದಿರಾ ಗಾಂಧಿಯವರ ಅಪ್ತರು ಕೂಡ ಆಗಿದ್ದರು ಎಂಬುದನ್ನು ಮರೆಯುವಂತಿಲ್ಲ!

ಅಮೃತ್ ಶೆಣೈ 2008 ರಲ್ಲಿ ನಡೆದ AICC ತರಬೇತಿಯಭಾಗವಹಿಸಿದ್ದರು.ತಳ ಮಟ್ಟದಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿರುವ ಅಮೃತ್ ಕಾರ್ಯಕರ್ತರ ಅಚ್ಚುಮೆಚ್ಚಿನ ನಾಯಕ ಆದ್ದರಿಂದ ಈ ಬಾರಿ ಲೋಕಸಭಾ ಕ್ಷೇತ್ರಕ್ಕೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಸಾಮಾಜಿಕ ಕಾರ್ಯಗಳಲ್ಲಿ ಬಹಳಷ್ಟು ಆಸಕ್ತಿ ಹೊಂದಿರುವ ಅಮೃತ್ “ಬಿಯಿಂಗ್ ಸೊಷಿಯಲ್” ಎಂಬ ಸಾಮಾಜಿಕ ಸಂಘಟನೆಯನ್ನು ಮುನ್ನಡೆಸುತ್ತಿದ್ದು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಕೂಡ ಇವರ ಜನಪ್ರಿಯಕ್ಕೆ ಕಾರಣವೆಂದು ಕಾರ್ಯಕರ್ತರು ಹೇಳುತ್ತಾರೆ.

ಇವರ ಸಾಮಾಜಿಕ ಕಳಕಳಿಗೆ ಭಾರತ್ ಜ್ಯೋತಿ ಪ್ರಶಸ್ತಿಯು ಕೂಡ 2017 ರಲ್ಲಿ ಒಲಿದು ಬಂದಿದೆ.

ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಅಮೃತ್ ಕಾರ್ಯಕರ್ತರ ಅಚ್ಚುಮೆಚ್ಚಿನ ನಾಯಕರೆಂಬುದು ಇತ್ತೀಚೆಗೆ ಅವರ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ಸಿಗುತ್ತಿರುವ ಬೆಂಬಲದಿಂದ ತಿಳಿದು ಬರುತ್ತಿದೆ.

ಶೋಭಾ ಕರಂದ್ಲಾಜೆಯ ವೈಫಲ್ಯ ಕೂಡ ಇವರಿಗೆ ಸಾಥ್ ನೀಡುವ ಸಾಧ್ಯತೆಯಿದ್ದು ಈ ಬಾರಿ ಅಮೃತ್ ಕಾಂಗ್ರೆಸ್ ನಿಂದ ಸ್ಪರ್ಧಿಸುವುದು ಬಹುತೇಕ ಖಚಿತಗೊಂಡಿದ್ದು ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಸಿಗುವುದು ಬಾಕಿ ಮಾತ್ರ ಉಳಿದಿದೆ.

ಉಡುಪಿ ಜಿಲ್ಲೆಯ ಬಗ್ಗೆ ಸಾಕಷ್ಟು ಅರಿವು ಇರುವುದರಿಂದ ಇವರು ಈ ಕ್ಷೇತ್ರದಲ್ಲಿ ಸಂಸದರಾದರೆ ಜಿಲ್ಲೆಯ ಸಮಸ್ಯೆಗಳಿಗೆ ಪ್ರಮಾಣಿಕವಾಗಿ ಸ್ಪಂದಿಸಬಹುದೆಂಬ ವಿಶ್ವಾಸ ಕೂಡ ಮತದಾರರಲ್ಲಿ ಮನೆ ಮಾಡಿರುವುದು ನಾಗರಿಕರ ಅಭಿಪ್ರಾಯದಲ್ಲಿ ವ್ಯಕ್ತವಾಗುತ್ತಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವ ಅಮೃತ್ ಶೆಣೈ ಉಡುಪಿ ಜಿಲ್ಲೆ ಬಹುತೇಕ ದುರ್ಬಲವಾಗಿದ್ದ ಎನ್ ಎಸ್ ಯುಐನ್ನು ಸಂಘಟಿಸಿ ಮತ್ತೊಮ್ಮೆ ವಿದ್ಯಾರ್ಥಿ ವಲಯದಲ್ಲಿ ಕಾಂಗ್ರೆಸ್ ಸೈದ್ದಾಂತಿಕತೆಯನ್ನು ಜೀವಂತವಿರಿಸಲು ಯಶಸ್ವಿ ಪ್ರಯತ್ನ ಮಾಡಿದ್ದರೆಂದು ವಿದ್ಯಾರ್ಥಿ ನಾಯಕರು ಅಭಿಪ್ರಾಯ ಪಡುತ್ತಾರೆ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಪ್ರಚಾರದ ಹೊಣೆ ಹೊತ್ತಿದ್ದ ಅಮೃತ್ ಈ ಕೆಲಸವನ್ನು ಬಿಜೆಪಿಯ ಪ್ರಬಲ ತಂತ್ರಗಾರಿಕೆಯ ಅಲೆಯಿದ್ದರು ಯಶಸ್ವಿಯಾಗಿ ನಿಭಾಯಿಸಿದ್ದು ಈಗ ಇತಿಹಾಸವೆಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಒಟ್ಟಿನಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ಜಿದ್ದಾಜಿದ್ದಿಯಲ್ಲಿ ಕೂಡಿದ್ದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು ಎಂಬುದರ ಮೇಲೆ ಈ ಸ್ಪರ್ಧೆ ನಿರ್ಧಾರವಾಗಲಿದೆಯೆಂದು ಉಡುಪಿ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.

1 COMMENT

Leave a Reply to Valasalegowda Cancel reply

Please enter your comment!
Please enter your name here

This site uses Akismet to reduce spam. Learn how your comment data is processed.