ಲೇಖಕಿ: ಚೈತ್ರಿಕಾ ಹರ್ಗಿ

ನಾನು ಯಾರಾದರೂ ಫ್ರೆಂಡ್ಸ್ ಗೆ ಕುಡಿತೀಯಾ? ಸಿಗರೇಟ್ ? ಹಿಂಗೆಲ್ಲಾ ಹೇಳಿದಾಗ ಇವೆಲ್ಲಾ ಇದೀಗ ಕಾಮನ್. ನೀ ಇನ್ನೂ ಯಾವ ಕಾಲದಲ್ಲಿದೀಯಾ? ಪ್ಯಾಶನ್ ಇವೆಲ್ಲಾ ಎಷ್ಟು ದಿನ ಬದುಕಿರ್ತೀವಿ. ಎನ್ನುವವರೆ ಜಾಸ್ತಿ. ಆದರೆ ನನ್ನ ಯೋಚನೆ ಅದಲ್ಲ. ಇವೆಲ್ಲ ಮಾಡುವವರು ಆರ್ಥಿಕವಾಗಿ ಸ್ವಾವಲಂಬಿಗಳೆ? ಅವರ ಕುಟುಂಬದ ಆರ್ಥಿಕತೆ ? ಆರೋಗ್ಯ? ಸಾಮಾಜಿಕ ಸ್ವಾಸ್ಥ್ಯ ? ಕುಡಿದ ಮೇಲೆ ಅವರ ಮಾನಸಿಕ ಸ್ಥಿತಿ? ಇಂದು ಅನೇಕ ರೀತಿಯ ಅಮಲನ್ನು ತಲೆಗೇರಿಸಿಕೊಂಡು ಓಡಾಡುತ್ತಿರುವ ಯುವ ಜನರಿಂದ ಕೌಟುಂಬಿಕ ಆರ್ಥಿಕತೆ ಜೊತೆಗೆ ಸಾಮಾಜಿಕ ಮಾನಸಿಕ ಸ್ವಾಸ್ಥ್ಯ ಅಧೋಗತಿಗೆ ಬರುತ್ತಿದೆ.

ಇತ್ತ ಮತ, ಪಂಥ ಕಟ್ಟಿಕೊಂಡು ಮೇಲ್ವರ್ಗ, ಹಿಂದುಳಿದದವರು, ದಲಿತರು ಎಂದು ತಾಸುಗಟ್ಟಲೆ ಸಭೆ ಚರ್ಚೆ ಹೋರಾಟ. ಸರ್ಕಾರಿ ಯೋಜನೆಗಳಿಗೆ ಆಗ್ರಹ, ಆರೋಪ ಪ್ರತ್ಯಾರೋಪ ನಡೆಯುತ್ತಿದ್ದರೆ ಅತ್ತ ಕಡೆ ಮೇಲ್ವರ್ಗ ಕೆಳವರ್ಗ ಎಂದೆನ್ನದೆ ಯುವಕರು ಕುಡಿತ, ಸಿಗರೇಟು,ಅಫೀಮು, ಜೂಜು, ಕಳ್ಳಸಾಗಾಣಿಕೆ, ಧರ್ಮದ ನಶೆಗೊಳಗಾಗಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸುತ್ತಿದ್ದಾರೆ. ಅಂದು ಮೇಲ್ವರ್ಗದವರು ದುಶ್ಚಟಕ್ಕೆ ಒಳಗಾಗುವುದು ಬಲು ಕಡಿಮೆ ಎನ್ನುವ ಮಾತಿತ್ತು ಆದರೆ ಇಂದು ಅವರು ಕೂಡ ಇದಕ್ಕೆ ಹೊರತಾಗಿಲ್ಲ.

ಯಾವ ಶಿಕ್ಷಣ ಎಲ್ಲರನ್ನೂ ಮತ್ತಷ್ಟು ಮೌಲ್ಯಯುರನ್ನಾಗಿ ಮಾಡುತ್ತದೆ ಎಂದು ನಂಬಿದ್ದೆವೊ ಅದು ಹುಸಿಯಾಗಿದೆ. ಶಿಕ್ಷಣ ದುಡಿದು ಹಣಗಳಿಸುವುದನ್ನು ಹೇಳುತ್ತಿದೆ ಹೊರತು ಬದುಕನ್ನು ರೂಪಿಸಿಕೊಳ್ಳುವುದ ಕಲಿಸುತ್ತಿಲ್ಲ. ಮನಸ್ಸುಗಳನ್ನು ಸ್ವಾತಂತ್ರ್ಯಗೊಳಿಸಿಲ್ಲ. ಕುಡಿತ ಅಂದಿಗೂ ಇಂದಿಗೂ ನಮ್ಮ ಹಳ್ಳಿಗರ ಬದುಕನ್ನು ದಾಸ್ಯಕ್ಕೆ ತಳ್ಳಿದ ದೊಡ್ಡ ಚಟ. ನಮ್ಮ ಹಿಂದುಳಿದ ಮತ್ತು ದಲಿತ ವರ್ಗದವರು ಇನ್ನೂ ಕೂಡಾ ಆರ್ಥಿಕ ಸ್ವಾವಂಬಿಗಳಾಗಿಲ್ಲ ಎಂದರೆ ಅದಕ್ಕೆ ಮುಕ್ಕಾಲು ಭಾಗ ಅವನೆ ಹೊಣೆ. ಕುಡಿತ ತಪ್ಪಾ? ಎಂದು ಕೇಳಿದರೆ It depends ಎನ್ನಬಹುದು.
ನಿಮ್ಮ ಆದಾಯ
ಕೌಟುಂಬಿಕ ಖರ್ಚು
ಆರೋಗ್ಯ
ಕುಡಿಯುವ ಪ್ರಮಾಣ
ದೈಹಿಕ ಮಾನಸಿಕ ಸ್ಥಿತಿ ಇವೆಲ್ಲ ಮುಖ್ಯವಾಗುತ್ತವೆ.

ಇದಕ್ಕೆ ಸಂಬಂಧಿಸಿದಂತೆ ಒಮ್ಮೆ ನಾನು ಹುಟ್ಟಿ ಬೆಳೆದ ಪರಿಸರದ ಜನರ ಆರ್ಥಿಕ ಸ್ಥಿತಿಗತಿ ನೋಡುವುದಾದರೆ, ನಮ್ಮ ಕಡೆಗಳಲ್ಲಿ ಎಸ್.ಸಿ ಮತ್ತು ಎಸ್.ಟಿಯ 99.99% ಜನರಿಗೆ ಮನೆಯ ಜಾಗವೊಂದನ್ನು ಬಿಟ್ಟರೆ ಯಾವುದೇ ಕೃಷಿ ಭೂಮಿಯಿಲ್ಲ. ನಾನು ಕಂಡಂತೆ ಯಾರೊಬ್ಬರೂ ಸರ್ಕಾರಿ ನೌಕರಿ ಮಾಡುತ್ತಿಲ್ಲ. ಈಗಿನ ನಮ್ಮ ಪೀಳಿಗೆಯ ಯುವಕರು ಮೇಲ್ವರ್ಗದ ಮನೆಗಳ ದನ ಮೇಯಿಸುವುದು, ಕೊಟ್ಟಿಗೆ ತೊಳೆಯುವುದು ಸೊಪ್ಪು ಹೊರುವುದು ಬಿಟ್ಟು ಗಾರೆ ಕೆಲಸ, ಮೀನುಗಾರಿಕೆಗೆ ಕರಾವಳಿಗೆ ಹೋಗುವುದು, ಬೇರೆ ಉದ್ಯೋಗ ಅರಸಿ ಹೋಗುತ್ತಿದ್ದಾರಾದರೂ ಸಾಮಾಜಿಕವಾಗಿ ಅಲ್ಪ ಮಟ್ಟದ ಬದಲಾವಣೆ ಆಗಿದೆ ಹೊರತು ಆರ್ಥಿಕವಾಗಿ ಅವರು ಇಂದೂ ಹಾಗೆಯೇ ಇದ್ದಾರೆ.

ಇನ್ನು ಹಿಂದುಳಿದ ವರ್ಗದ ಹಿಂದೂ ನಾಮಧಾರಿ, ಈಡಿಗ ಸಮುದಾಯದ 98% ಜನರಿಗೆ ಭೂಮಿ ಇದೆ. ಆದರೆ ಅವೆಲ್ಲ ತುಂಡು ಭೂಮಿಗಳು ವಾರ್ಷಿಕ ಆದಾಯ ರೂ,50,000 ಕೂಡ ದಾಟದವರೆ ಬಹುಪಾಲು. ದೊಡ್ಡ ಹಿಡುವಳಿದಾರರು ಊರಿಗೆ ಬೆರಳೆಣಿಕೆ ಸಿಗುತ್ತಾರೆ. ಇನ್ನು ಒಕ್ಕಲಿಗ ಗೌಡರಿಗೂ ತುಂಡು ಹಿಡುವಳಿ ಭೂಮಿ ಅನೇಕರಿಗೆ ಭೂಮಿಯಿಲ್ಲ. ಕೂಲಿಯನ್ನೆ ನಂಬಿಕೊಂಡು ಬದುಕು ನಡೆಸುವವರೆ ಅನೇಕರು.

ಸಂಪತ್ತು ಕ್ರೂಢೀಕರಣವಾಗಿದ್ದು ಮೇಲ್ವರ್ಗದ ಬ್ರಾಹ್ಮಣ ವರ್ಗದಲ್ಲಿ. ಅವರು ಇಂದು ಕೂಲಿಯವರು ಸಿಗದೆ ಕಷ್ಟಪಡುತ್ತಿದ್ದಾರಾದರೂ ಕೂಲಿಯನ್ನೆ ನಂಬಿಕೊಂಡ ವರ್ಗದವರು ಇನ್ನೂ ಅವರಿಗೆ ಆಧಾರವಾಗಿದ್ದಾರೆ. ಆದರೆ ಅವರ ಬದುಕಲ್ಲೂ ನೆಮ್ಮದಿಯಿಲ್ಲ ಓದಿಕೊಂಡ ಮಕ್ಕಳು ನಗರ, ವಿದೇಶಗಳಲ್ಲಿ ಇದ್ದರೆ ಮನೆಯಲ್ಲಿ ಇರುವ ಮಕ್ಕಳಲ್ಲಿ ಅನೇಕರು ಅನೇಕ ರೀತಿಯ ನಶೆ ಹತ್ತಿಸಿಕೊಂಡು ಬದುಕುತ್ತಿದ್ದಾರೆ.
_____________________________

ಊರಲ್ಲಿಹೆಂಗಸರಿಗೆ ಕೂಲಿ ಎಂದರೆ ತೋಟದ ಕಳೆ, ಪಾತ್ರೆ ತೊಳೆಯುವುದು, ಅಡಕೆ ಸುಲಿಯುವುದು ಇತರ ಮನೆಗೆಲಸ ಮಾಡುತ್ತಾರೆ. ಅವರಿಗೆ ರೂ.100-150 ಕೂಲಿ ಸಿಗುತ್ತದೆ. ಗಂಡಸರಿಗೆ ಕೆಲಸದ ಆಧಾರದ ಮೇಲೆ ರೂ 150 ರಿಂದ 400ರ ವರೆಗೂ ಕೂಲಿ ಸಿಗುತ್ತದೆ.

ಖರ್ಚು ನೋಡಿದರೆ. 300 ರೂ ದುಡಿದವ ರೂ.150 ಕುಡಿಯಲು ಸೇದಲು ಪಾನ್ ಪರಾಗ್, ಅರ್ಧ ಲೀಟರ್ ಪೆಟ್ರೋಲ್ ರೂ. 50 ಎಂದು ಖರ್ಚು ಮಾಡಿದರೆ ಇಂದಿನ ಬೆಲೆಯಲ್ಲಿ ಮನೆಯ ದಿನಸಿ, ಇನ್ನಿತರ ಖರ್ಚಿಗೆ ರೂ. 100 ಸಾಕಾಗದು. 1 ಕೆ.ಜಿ ಮೀನಿಗೆ ರೂ. 100 ಇದೆ. 1 ಕೆ.ಜಿ ತರಕಾರಿ ಕಡಿಮೆ ಎಂದರೆ 20 ರೂಪಾಯಿ ಒಳಗೆ ದೊರಕದು. ಬಟ್ಟೆ ಬರೆ, ತಿರುಗಾಟ, ಮಕ್ಕಳ ಓದು, ಮನೆಯ ಇತರೆ ಖರ್ಚು? ಇನ್ನು 150 ದುಡಿಯುವವನ ಕಥೆ?

ತಿಂಗಳ ಹಿಂದೆ ಹರಿಜನ ಕೇರಿಯ ಮುದುಕಿ ಕನ್ನಮ್ಮ ತನ್ನ ಮಾಂಸವೇ ಎಲ್ಲದ ದೇಹವನ್ನು ದುಡಿಕೊಂಡು ಬರಿ ಕಾಲಲ್ಲಿ ಕಾಲೆಳೆಯುತ್ತಾ ಬರುತ್ತಿದ್ದರು. ಏನಾಯ್ತು ಎಂದು ಕೇಳಿದರೆ ಮಗ ಸುಧಾಕರ ಕುಡಿದು ಬಂದು ತನಗೆ ಮತ್ತು ಗಂಡನಿಗೆ ಒಂದು ವಾರದಿಂದ ದಿನವೂ ಬಿಡದೆ ಹೊಡೆಯುತ್ತಿದ್ದಾನೆ ಅಂದಳು. ಯಾಕೆ ಎಂದು ಕೇಳಿದರೆ. ಮನೆಯಲ್ಲಿ ಮೀನು ತೆಗೆದುಕೊಳ್ಳದೆ ಬರಿ ಸಾರು ಮಾಡಿದ್ದಕ್ಕೆ ಎಂಬ ಉತ್ತರ. ಆಕೆಗೆ ಮೀನು ಕೊಳ್ಳಲು ದುಡ್ಡಾದರೂ ಎಲ್ಲಿಂದ ಬರಬೇಕು ? ಆಕೆಗೆ ದುಡಿಯುವ ಶಕ್ತಿ ಇಲ್ಲ ದಿನಕ್ಕೆ ಹೇಗೋ ಮಾಡಿ ಐದರಿಂದ ಆರು ಗಿದ್ನ ಅಡಕೆ ಸುಲಿಯುತ್ತಾಳೆ. ಒಂದು ಗಿದ್ನಕ್ಕೆ ರೂ.15 ರಂತೆ 90 ರೂಪಾಯಿ ಸಿಕ್ಕುತ್ತದೆ. ಆದರೆ ಎಲ್ಲಾ ದಿನ ಅವಳಿಗೆ ಸುಲಿಯಲಾಗದು . ಇವರೆಲ್ಲಾ ಸಂಜೆ ಮನೆಗೆ ಹೋಗುವಾಗ ದಿನಸಿ ಸಾಮಾನು ಕೊಳ್ಳಲು ಅಂಗಡಿಗೆ ಹೋಗುತ್ತಾರೆ. ಅವರು ಕೆ.ಜಿ ಗಟ್ಟಲೆ ಕೊಂಡಿದ್ದನ್ನೆ ಕಂಡೇ ಇಲ್ಲ ನಾನು.10 ರೂಪಾಯಿಯಂತೆ ಮನೆಗೆ ಬೇಕಾದ ಅಡುಗೆ ಸಾಮಾನು ಎಲ್ಲವನ್ನು ಒಂದೊಂದು ಪೊಟ್ಟಣದಲ್ಲಿ ಕಟ್ಟಿಸಿಕೊಳ್ಳುತ್ತಾರೆ. ಅಂದಿಗೂ ಇಂದಿಗೂ ಅವರ ಬದುಕು ಹಾಗೆಯೇ ಇದೆ.
ಮಕ್ಕಳು ತಂದೆ ತಾಯಿಗೆ ಆಸರೆಯಾಗುತ್ತಿಲ್ಲ. ಸರ್ಕಾರದ 14 ವರ್ಷದ ಖಡ್ಡಾಯ ಶಿಕ್ಷಣ ಮಾತ್ರ ಪಡೆಯುತ್ತಿರುವವರೆ ಹೆಚ್ಚು.

ಹಿಂದುಳಿದ ಮತ್ತು ಮೇಲ್ವರ್ಗದವರ ಮನೆಗಳಲ್ಲಿ ಊರಿನಲ್ಲೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಇರುವ ಅನೇಕರು ಕುಡಿಯುವುದು, ಕಳ್ಳಸಾಗಾಣಿಕೆ, ಬೇಗ ದುಡ್ಡುಮಾಡುವ ಹಾದಿಯಲ್ಲಿ ನಗರಗಳಿಗೆ ಬಂದು ಅಪರಾಧ ಕೃತ್ಯಗಳಲ್ಲಿ ತೊಡಗುವುದು ಮಾಡುತ್ತಿದ್ದಾರೆ. ಇನ್ನು ಶಿಕ್ಷಣ ಪಡೆದು ನಗರ ಸೇರಿದವರಿಗೆ ಹಳ್ಳಿಕಡೆ ತಲೆ ಹಾಕಲು ಮನಸ್ಸಿಲ್ಲ. ಮನೆಗೆ ದುಡ್ಡು ಕಳಿಸುತ್ತಾರಾದರೂ ತಂದೆ ತಾಯಿಗೆ ವಿಶ್ರಾಂತಿ ನೆಮ್ಮದಿಯಿಲ್ಲ.

ಈ ವರ್ಗಗಳ ಬದುಕಿಗೆ ಆರ್ಥಿಕತೆಗೆ ಸಂಬಂಧಿಸಿದಂತೆ ಸರ್ಕಾರ ಬೇಕಷ್ಟು ತಾತ್ಕಾಲಿಕ ಯೋಜನೆಗಳನ್ನು ಮಾಡುತ್ತಾ ಬಂದಿದೆ. ಅದು ಅವರ ಇಡೀ ಬದುಕನ್ನು ತಲುಪಲು ಸಾಧ್ಯವಿಲ್ಲ. ಆರ್ಥಿಕವಾಗಿ ಬೆಂಬಲವಾಗಿ ನಿಲ್ಲಬೇಕಾದ ಮಕ್ಕಳು ಬೆರೆಯದೇ ಹಾದಿಯನ್ನು ಹಿಡಿದಿದ್ದಾರೆ. ಇದು ಒಂದು ಮನೆಯದಲ್ಲ ಮುಕ್ಕಾಲಕ್ಕಿಂತ ಹೆಚ್ಚು ಮನೆಗಳ ಕತೆ.

ಕಾಲೇಜು ಹುಡುಗರು ಅಪ್ಪನ ಬೆವರಂಟಿದ ದುಡ್ಡಲ್ಲಿ ಸಿಗರೇಟು ಕೊಂಡು ಸೇದುತ್ತಿದ್ದಾರೆ. ಪೇಟೆಯ ಕಟ್ಟೆಗಳಲ್ಲಿ ಜೂಜು ಕಟ್ಟಿ ಲೂಡೋ ಇನ್ನಿತರ ಸುಡಗಾಟು ಆಟ. ಜೊತೆಗೆ ಕುಡಿತವನ್ನು ಅಂಟಿಸಿಕೊಂಡಿದ್ದಾರೆ. ನಮ್ಮ ಮನಸ್ಸುಗಳನ್ನು ಸ್ವಾಸ್ಥ್ಯ ಗೊಳಿಸದೆ, ದೌರ್ಬಲ್ಯಗಳನ್ನು ಮೀರಿ ಕೆಲವನ್ನು ತಿರಸ್ಕರಿಸದ ಹೊರತಾಗಿ ಮನುಷ್ಯ ಸಾವಿರ ವರ್ಷ ಕಳೆದರು ಕೆಲವು ಪರಕೀಯತೆಯಿಂದ ಬರಲಾರ. ಸಮಾಜದ ಉದ್ದಾರ ಮತ್ತು ನಮ್ಮ ಆರ್ಥಿಕ ಸಾಮಾಜಿಕ ಬೆಳವಣಿಗೆಗಳು ಸರ್ಕಾರಗಳ ಯೋಜನೆಗಳಿಂದ ಮಾತ್ರವೇ ಸಾಧ್ಯವಿಲ್ಲ. ವೈಯಕ್ತಿಯ ಬದುಕಿನ ರೀತಿ ಮುಖ್ಯವಾಗುತ್ತದೆ.

ಒಬ್ಬ ಸಾಮಾನ್ಯ ರೈತ ಕೃಷಿ ಭೂಮಿಯ ವಾರ್ಷಿಕ ಆದಾಯ ಹನ್ನೊಂದು ಸಾವಿರ ದಾಟದವ ತಾನೇ ದುಡಿದು 3 ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬಲ್ಲ ಎಂಬುದಕ್ಕೆ ಅಪ್ಪನ ಬದುಕು ಮಾದರಿ. 50 ರೂ ಕೂಲಿಯನ್ನು ತಂದು ಆಯಿಯ ಕೈಗೆ ಇಡುತ್ತಿದ್ದವರು ಸಂತೆಗೆ ಹೋದರೆ 4 ಗಂಟೆಯಾದರೂ ಮನೆಗೆ ಬಂದು ಉಣ್ಣುತ್ತಿದ್ದರು, ಒಂದು ದಿನವು ಬೀಡಿ ಸಿಗರೇಟು, ಸಾರಾಯಿ ಕುಡಿಯದ ಮನುಷ್ಯ ಅಕ್ಷರಶಃ ಅವರ ಬೆವರಿನಿಂದಲೇ ನಮ್ಮನ್ನು ಬೆಳೆಸಿದವರು. ಶಿಕ್ಷಣವೊಂದನ್ನು ಬಿಟ್ಟು ನಿಮಗೆ ಮತ್ತೇನನ್ನು ನನಗೆ ಕೊಡಲಾಗದು ಎನ್ನುತ್ತಾಅಕ್ಕಂದೀರಿಗೆ ನನಗೆ ಬದುಕಿನ ಪಾಠ ಕಲಿಸಿದವರು. ಮೂವರನ್ನು ಕೂರಿಸಿ ಅಪ್ಪ ಆಯಿ ಮನೆಯ ಲೆಕ್ಕಾಚಾರವನ್ನು ಒಂದು ರೂಪಾಯಿ ಬಿಡದೆ ಹೇಳುತ್ತಿದ್ದಾಗಲೇ ಬದುಕಿನ ಆರ್ಥಿಕತೆ ಅರ್ಥವಾಗುತ್ತಾ ಹೋಯಿತು. ಮೈಮೇಲೆ ಒಂದು ರೂಪಾಯಿ ಸಾಲ ಉಳಿಸಿಕೊಳ್ಳದೆ ಸುಮಾರು ವರ್ಷದಿಂದ ವಿಶ್ರಾಂತವಾಗಿ ಇಂದಿಗೂ ಆರಾಮಾಗಿ ಸರಳ ಬದುಕು ನಡೆಸುತ್ತಿದ್ದಾರೆ. ಆಸ್ತಿ ಏನಿದೆ ಬದುಕಿಗೆ? ಎಂದು ಯಾರಾದರೂ ಕೇಳಿದರೆ 3 ಮಕ್ಕಳಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಆದರೆ ಇಂದಿನ ದಲಿತ ನಾಯಕರು ಕುಡಿಯುತ್ತಾರೆ ಇತರೆ ಬೇರೆ ಚಟ ಮಾಡುತ್ತಾರೆ ಎಂದರೆ ನನಗೆ ನಗು ಬರುತ್ತದೆ. ದಲಿತರು ಇನ್ನೂ ಬದುಕಿನಲ್ಲಿ ಬದಲಾವಣೆ ಕಂಡಿಲ್ಲ ಎಂದರೆ ಇದು ಮುಖ್ಯ ಕಾರಣ. ನಾನು ಚೋಮನ ದುಡಿ ಕಾದಂಬರಿಯನ್ನು ಓದಿದ್ದು ಈ ದೃಷ್ಟಿಕೋನದಲ್ಲೆ. ನನ್ನ ಸಿವಿಲ್ ಸರ್ವಿಸ್ ಕ್ಲಾಸ್ ಗಳಲ್ಲಿ ಇದನ್ನು ಬೇರೆಯಾಗೆ ಹೇಳುತ್ತಾರೆ. ನನಗೆ ಚೋಮ ಮತ್ತು ಚೋಮನ ಮಕ್ಕಳು ಕಾದಂಬರಿಯಲ್ಲಿ ಹೆಚ್ಚಿನ ಕಡೆ ಸ್ವಯಂಕೃತ ಅಪರಾಧಿಗಳಾಗಿ ಕಾಣುತ್ತಾರೆ. ಬದುಕಿನ ದುರಂತವನ್ನು ಅವರೆ ಆಹ್ವಾನಿಸಿಕೊಳ್ಳುತ್ತಾರೆ. ಅವರ ಬದುಕು ಅಧೋಗತಿಯೆಡೆ ಸಾಗುತ್ತಲೇ ಹೋಗುವುದು ಅವರ ನಡೆಗಳಿಂದಲೇ. ಚೋಮ ದಲಿತರ ಸಂಕೇತವಾಗಿ ಕಾರಂತರಿಂದ ಉತ್ತಮವಾಗಿ ಚಿತ್ರಿಸಲ್ಪಟ್ಟಿದ್ದಾನೆ. ಕಾಲ ಉರುಳುತ್ತಿದೆ. ಚೋಮ ಇಂದಿಗೂ ಹಾಗೆ ಇದ್ದಾನೆ ಅನೇಕ ಚೋಮರೂ, ಚೋಮನ ಮಕ್ಕಳು ದೌರ್ಬಲ್ಯದಿಂದ ಹೊರ ಬರದೆ ಅಂತ್ಯ ಕಂಡಿದ್ದಾರೆ. ಕಾಣುತ್ತಿದ್ದಾರೆ.

(ಚೈತ್ರಿಕಾ ನಾಯ್ಕ ಹರ್ಗಿ ಪತ್ರಿಕೋದ್ಯಮ ವಿದ್ಯಾರ್ಥಿ, ಉದಯೋನ್ಮುಖ ಲೇಖಕಿ ಹಾಗೂ ಇವರ ಲೇಖನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿರುತ್ತದೆ. ಸಾಮಾಜಿಕ ಜಾಲಾತಾಣದಲ್ಲಿ ಹಲವಾರು ಲೇಖನಗಳ ಮೂಲಕ ಹೆಸರು ವಾಸಿಯಾಗಿದ್ದಾರೆ)

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.