ವಿಶ್ಲೇಷಣೆ: ಯಾಸೀನ್ ಕೋಡಿಬೆಂಗ್ರೆ

ಪಂಚರಾಜ್ಯ ಚುನಾವಣೆ ಬಿಜೆಪಿಯ ಅಹಂಗೆ ಸ್ವಲ್ಪ ಮಟ್ಟಿಗೆ ಬ್ರೇಕ್ ಹಾಕಿದೆ. ಮೀಝೊರಾಮ್, ತೆಲಂಗಾಣ ಸ್ಥಳೀಯ ಪಕ್ಷಗಳು ತಮ್ಮ ಹಿಡಿತಕ್ಕೆ ತೆಗೆದುಕೊಂಡರೆ, ಮಧ್ಯ ಪ್ರದೇಶ,ರಾಜಸ್ಥಾನ ಮತ್ತು ಛತ್ತೀಸ್ಗಢವನ್ನು ಆಡಳಿತಾರೂಢ ಬಿಜೆಪಿಯ ತೆಕ್ಕೆಯಿಂದ ತನ್ನತ್ತ ಸೆಳೆಯುವಲ್ಲಿ ಕಾಂಗ್ರೆಸ್ ಒಂದು ಹಂತದಲ್ಲಿ ಯಶಸ್ವಿಯಾಗಿದೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶವನ್ನು ಮುಂಬರುವ 2019 ರ ಲೋಕಸಭಾ ಚುನಾವಣೆಗೆ ದಿಕ್ಸೂಚಿಯೆಂದು ಬಿಂಬಿಸಲ್ಪಡುತ್ತಿದೆ.

‘ಕಾಂಗ್ರೇಸ್ ಮುಕ್ತ ಭಾರತ’ ಮಾಡುತ್ತೇವೆಂದು ಹೇಳುತ್ತಿದ್ಧ ಬಿಜೆಪಿಗೆ ಚುನಾವಣೆಯ ಫಲಿತಾಂಶ ಸಕತ್ತಾಗಿ ಮರ್ಮಾಘಾತ ನೀಡಿರುವುದು ಸುಳ್ಳಲ್ಲ. ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಮೋದಿ,ಅಮಿತ್ ಶಾ vs ರಾಹುಲ್ ಗಾಂಧಿಯ ನಡುವಿನ ನೆರಾ ಹಣಾಹಣೆಯೆಂದು ಬಿಂಬಿಸಲ್ಪಟ್ಟಿತ್ತು. ರಾಹುಲ್ ಗಾಂಧಿ ಈ ಜಿದ್ದಾಜಿದ್ದಿಯಲ್ಲಿ ಯಶಸ್ವಿಯಾಗಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ನವೋಲ್ಲಾಸವನ್ನು ಮತ್ತು ಮುಂಬರುವ ಲೋಕಸಭಾ ಚುನಾವಣೆಗೆ ಮತ್ತಷ್ಟು ಸ್ಪೂರ್ತಿದಾಯಕವಾಗಿ ಕೆಲಸ ಮಾಡಲು ಹುಮ್ಮಸ್ಸು ಸೃಷ್ಟಿಸಿದೆ ಎನ್ನಬಹುದು.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸೇರಿಕೊಂಡು ರಾಹುಲ್ ಗಾಂಧಿಯವರನ್ನು ವೈಯಕ್ತಿಕವಾಗಿ ಟೀಕಿಸುವ ಭರದಲ್ಲಿ ಜನರ ಸಮಸ್ಯೆಗಳನ್ನುದ್ದೇಶಿಸಿ ಮಾತನಾಡುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ರಾಹುಲ್ ಗಾಂಧಿಯನ್ನು ನಾಮ್ ದಾರ್ ಮತ್ತು ಪಪ್ಪು ಎಂದು ಬಿಂಬಿಸುವುದರಲ್ಲೇ ಸ್ವತಃ ವರ್ಚಸನ್ನು ಮೋದಿ ಹಾಳು ಮಾಡಿಕೊಂಡರಲ್ಲದೇ ಜನರ ದೃಷ್ಟಿಯಲ್ಲಿ ರಾಹುಲ್ ಗಾಂಧಿಯತ್ತ ಒಲವು ಹೆಚ್ಚಾಗಲು ಕಾರಣೀಕೃತರಾದರು.

ಆಡಳಿತದಲ್ಲಿನ ಅಧಕ್ಷತೆ, 2016 ರಲ್ಲಿ ಮಾಡಿದ ನೋಟ್ ಬಂಧಿ ಪರಿಣಾಮದಿಂದ ಮುಖ್ಯವಾಗಿ ಸಾಮಾನ್ಯ ಜನರು ಅನುಭವಿಸಿದ ಕಷ್ಟಕ್ಕೆ ಮತದಾರರ ಉತ್ತರವೆಂದೂ ಪ್ರಮುಖವಾಗಿ ಮೂರು ರಾಜ್ಯಗಳ ಫಲಿತಾಂಶವನ್ನು ವಿಶ್ಲೇಷಿಸಬಹುದಾಗಿದೆ. ಶೇ.93% ರಷ್ಟು ವ್ಯವಹಾರವನ್ನು ನಗದಿನಲ್ಲೇ ಮಾಡುವ ಜನರು ನೋಟ್ ಬಂಧಿ ಕಾರಣಕ್ಕೆ ಎಷ್ಟು ಸಂಕಷ್ಟಕ್ಕೀಡಾಗಬೇಕಾಯಿತು ಮತ್ತು ಅವರ ಆಕ್ರೋಶ ಕ್ರಮೇಣ ಹೊರ ಬರುತ್ತಿರುವುದು ಕೂಡ ಬಿಜೆಪಿ ಸೋಲಿಗೆ ಪ್ರಮುಖ ಕಾರಣಗಳಲ್ಲೊಂದು!

ಅವೈಜ್ಞಾನಿಕ ವಾಗಿ ಜಾರಿಗೊಳಿಸಿದ ಜಿ.ಎಸ್.ಟಿ ಮತ್ತು ಮಧ್ಯ ಪ್ರದೇಶದಲ್ಲಿ ರೈತರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದೆ ಇರುವಂತಹದು ಸೇರಿದಂತೆ 2017 ರ ಜೂನ್ ನಲ್ಲಿ ರೈತರ ಮೇಲೆ ನಡೆಸಿದ ಗೋಲಿಬಾರ್ ಕೂಡ ಬಿಜೆಪಿಗೆ ಸೋಲಿನ ಹಾರ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

2014 ರಲ್ಲಿ ಅಭಿವೃದ್ಧಿ ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದು ಯಾವಾಗ ತನ್ನ ಘೋಷಣೆಗಳು ವಿಫಲವಾಗತೊಡಗಿತೋ, ಆಗ ರಾಮ ಮಂದಿರ, ನಗರಗಳ ಹೆಸರು ಬದಲಾವಣೆಯಂತಹ ಧ್ರುವೀಕರಣದ ರಾಜಕೀಯದತ್ತ ವಾಲಿದ ಬಿಜೆಪಿಗೆ ಮತದಾರರು ಬಿಜೆಪಿಯ “ಸುಳ್ಳಿನ ಗಾಳಿಪಟ” ಇನ್ನಷ್ಟು ಹಾರದಂತೆ ದಾರ ಕತ್ತರಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಪ್ರಮುಖವಾಗಿ ದಲಿತರು,ಅಲ್ಪ ಸಂಖ್ಯಾತರ ಮೇಲೆ ನಡೆದ ಹಿಂಸಾಚಾರಗಳು ಕೂಡ ಬಿಜೆಪಿ ವರ್ಚಸನ್ನು ತಗ್ಗಿಸಿದ್ದು ಅದು ಮುಖ್ಯವಾಗಿ ತೆಲಂಗಾಣದಲ್ಲಿ ಬಿಜೆಪಿಗೆ ಬಲವಾಗಿ ಹೊಡೆತ ನೀಡಿದೆ. ಬಿಜೆಪಿ ಗೆದ್ದರೆ ಹೈದರಾಬಾದ್ ಹೆಸರು ಬದಲಾಯಿಸುವ ಯೋಗಿಯ ಮಾತಿಗೆ ತೆಲಂಗಾಣ ಫಲಿತಾಂಶ ಕಪಾಳಕ್ಕೆ ಬಾರಿಸಿದಂತಾಗಿರುವುದು ಅಕ್ಷರಶಃ ನಿಜ!

ಒಟ್ಟಿನಲ್ಲಿ ಈ ಫಲಿತಾಂಶವು ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂಬುದರಲ್ಲಿ ಸಂದೇಹ ಕಂಡು ಬರುತ್ತಿಲ್ಲ. ಕಾರಣ ಬಿಜೆಪಿ ಈಗ ಹೋಗುತ್ತಿರುವ ದಾರಿ ಸಂಪೂರ್ಣವಾಗಿ ಅಡ್ಡದಾರಿಯೆಂಬುದನ್ನು ಮತದಾರ ಪಂಚ ರಾಜ್ಯ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾನೆ. ಹಿಂದಿ ಬಾಹುಳ್ಯ ಪ್ರದೇಶದಲ್ಲೇ ಮೋದಿ ಹಿಡಿತ ಸಡಿಲಗೊಂಡಿದೆ ಎಂದರೆ ಬಿಜೆಪಿಗೆ 2019 ರ ಚುನಾವಣೆ ಎಚ್ಚರಿಕೆಯ ಕರೆ ಗಂಟೆಯೇ ಆಗಿದೆ.

ಪಂಚರಾಜ್ಯದಲ್ಲಿ ಒಟ್ಟು 520 ವಿಧಾನ ಸಭಾ ಕ್ಷೇತ್ರಗಳು, ಒಟ್ಟು 65 ಲೋಕಸಭಾ ಕ್ಷೇತ್ರಗಳಿವೆ. ಪ್ರಮುಖವಾಗಿ ಈ ಭಾಗದಲ್ಲಿ 2014 ರಲ್ಲಿ ಬಿಜೆಪಿ 60 ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಆದರೆ ಆ ಸಂದರ್ಭದಲ್ಲಿ ಅದರ ಬಳಿಯಿದ್ಧ ವಿಧಾನ ಸಭಾ ಕ್ಷೇತ್ರಗಳು ಬರೊಬ್ಬರಿ 443!

ಆದರೆ ಈ ಬಾರಿ ಬಿಜೆಪಿಯ ಹಿಡಿತದಲ್ಲಿ ಕೇವಲ 193 ಸೀಟುಗಳು ಮಧ್ಯ ಪ್ರದೇಶ,ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ಉಳಿದಿದೆ. ಈ ಲೆಕ್ಕಚಾರದ ಪ್ರಕಾರ ಬಿಜೆಪಿ ಹೆಚ್ಚೆಂದರೆ 24 ಸೀಟುಗಳನ್ನು ಗೆದ್ದರೂ ಕನಿಷ್ಠ 41 ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳುವ ಭೀತಿ ಬಿಜೆಪಿಗೆ ಖಂಡಿತ ಇದೆ!

ಕಾಂಗ್ರೆಸ್ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿದ್ದೇ ಆಗಿದ್ದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಮನೆಯ ಹಾದಿ ತೋರಿಸುವಲ್ಲಿ “ಕೈ” ಯಶಸ್ವಿಯಾಗಲಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.