– ಅನಾಮಿಕ

ನಮಗರಿವಿಲ್ಲದಂತೆ ನಮ್ಮನ್ನು ಕಲ್ಪಿಸಿಕೊಳ್ಳುತ್ತಾ, ನಮ್ಮ ಕೈಯಾರೇ ಈ ಧಾರವಾಹಿಗಳ ಮುಖಾಂತರ ಅಮೂಲ್ಯವಾದ ಕೌಟುಂಬಿಕ ಸಂಬಂಧಗಳಲ್ಲಿ ಸ್ವತಃ ನಾವೇ ಹುಳಿ ಹಿಂಡಲು ಪ್ರಯತ್ನಿಸುತ್ತಿರುವುದು ನಗ್ನ ಸತ್ಯ!

ಪ್ರತಿ ದಿನ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಟಿವಿ ವಾಹಿನಿಗಳಲ್ಲಿ ಬರುವ ಕೌಟುಂಬಿಕ ಧಾರವಾಹಿಗಳು ನಮಗರಿವಿಲ್ಲದಂತೆ ನಮ್ಮ ಕುಟುಂಬಗಳಲ್ಲಿನ ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತಿರುವುದು ಸುಳ್ಳಲ್ಲ. ಹಲವಾರು ವರ್ಷಗಳು ಚ್ವಿಂಗಮ್ ನಂತೆ ಎಳೆದುಕೊಂಡು ಹೋಗುವ ಧಾರವಾಹಿಗಳಲ್ಲಿನ ಹೆಚ್ಚಿನ್ನೆಲ್ಲಾ ಕಥೆಗಳು ಸಂಬಂಧಗಳಲ್ಲಿ ಹುಳಿ ಹಿಂಡುವ ಹೊಸ ವಿಧಾನಗಳನ್ನು ಆವಿಷ್ಕರಿಸಿ ಬೋಧಿಸುತ್ತದೆ.

ನಾವು ಪ್ರತಿ ನಿತ್ಯ ಬಾಯ್ಬಿಟ್ಟು ನೋಡುವ ಈ ಧಾರವಾಹಿಗಳು ನಮ್ಮ ಕುಟುಂಬಗಳಲ್ಲಿ ವಿಷ ಬೀಜವನ್ನು ಬಿತ್ತರಿಸುತ್ತಿದೆ. ಪ್ರತಿ ಸಂಬಂಧದಲ್ಲಿ ಸಂಶಯದ ಸುಳಿಗಳನ್ನು ಸೃಷ್ಟಿಸುವಲ್ಲಿ ಮಹತ್ತರವಾದ ಪಾತ್ರವಹಿಸುತ್ತಿದೆ. ಪ್ರಸ್ತುತ ಪ್ರಸಾರವಾಗುವ ಧಾರವಾಹಿಗಳ ಪ್ರತಿ ಕಥೆಯಲ್ಲೂ ಸಂಬಂಧಗಳ ನಡುವೆ ರೂಪಿಸುವ ಷಡ್ಯಂತ್ರಗಳನ್ನು ಬಹಳ ವೈಭವೀತವಾಗಿ ಅದಕ್ಕಿಂತಲೂ ಆ ಷಡ್ಯಂತ್ರಗಳನ್ನು ಸೂಕ್ಷ್ಮವಾಗಿ ವೀಕ್ಷರ ಮಸ್ತಿಷ್ಕದಲ್ಲಿ ತುಂಬಲು ಹೊಸ ಕ್ರಿಯಾತ್ಮಕ ವಿಧಾನಗಳನ್ನು ಹೊರ ತರಲಾಗುತ್ತಿದೆ.

ಅತ್ತೆ-ಸೊಸೆಯ ನಡುವಿನ ಸಂಬಂಧಗಳನ್ನು ಶತ್ರುಗಳಂತೆ ಬಿಂಬಿಸುವ ಧಾರವಾಹಿ ಮುಖ್ಯವಾಗಿ ಅತ್ತೆಯನ್ನು ಪದೆ ಪದೇ ಅಪರಾಧಿಕ ಸ್ಥಾನದಲ್ಲಿಟ್ಟರೆ, ಇನ್ನು ಕೆಲವು ಧಾರವಾಹಿಗಳಲ್ಲಿ ಸೊಸೆಯನ್ನು ಅತ್ಯಂತ ಕ್ರೂರಿಯಾಗಿ ಬಿಂಬಿಸಲಾಗುತ್ತದೆ. ಮೈದುನ, ಮಾವ,ಚಿಕ್ಕಪ್ಪ, ದೊಡ್ಡಪ್ಪ, ನಾದಿನಿ, ಬಾಮೈದ,ಚಿಕ್ಕಮ್ಮ, ಸೋದರ ಅತ್ತೆ, ಸೋದರ ಮಾವ ಹೀಗೆ ಪ್ರತಿ ಸಂಬಂಧದ ಪಾತ್ರಗಳನ್ನು ಷಡ್ಯಂತ್ರ ರೂಪಕಗಳಾಗಿ ಪ್ರದರ್ಶಿಸುವುದು ಇಂದಿನ ಧಾರವಾಹಿಗಳ ಬಂಡವಾಳವಾಗಿ ಬಿಟ್ಟಿದೆ. ಈ ಧಾರವಾಹಿಗಳಲ್ಲಿ ಉದ್ಬವವಾಗುವ ಸನ್ನಿವೇಶಗಳು ನಮ್ಮನ್ನು ಮತ್ತಷ್ಟು ಕ್ರೂರಿಯನ್ನಾಗಿಸುತ್ತಿದೆ, ಸಂವೇದನಾಶೀಲ ರಹಿತರನ್ನಾಗಿಸುವುದರೊಂದಿಗೆ ನಮ್ಮ ಸಂಬಂಧಗಳಲ್ಲಿ ಒಡಕು ಉಂಟು ಮಾಡುವಲ್ಲಿ ಮಹತ್ತರದ ಪಾತ್ರ ವಹಿಸುತ್ತಿರುವುದು ಸುಳ್ಳಲ್ಲ!

ಸಂಜೆ ಹೊತ್ತು ನಾವು ಏನೇ ಕೆಲಸವಿದ್ದರೂ ಬದಿಗೊತ್ತಿ ನೋಡುವ “ಮನೆ ಹಾಳು” ಮಾಡುವಂತಹ ಧಾರವಾಹಿಗಳು ಕೇವಲ ದೊಡ್ಡವರ ಮಾನಸೀಕತೆಯನ್ನು ಬದಲಾಯಿಸುವುದಲ್ಲ, ಬದಲಾಗಿ ಅದು ಮಕ್ಕಳ ಮೇಲು ಗಂಭೀರವಾದ ಪರಿಣಾಮ ಬೀರುತ್ತಿದೆ. ಮಕ್ಕಳು ಬಿಳಿ ಹಾಳೆ ಇದ್ದ ಹಾಗೆ ಸಣ್ಣ ವಯಸ್ಸಿನಲ್ಲಿ ಅವರು ಗ್ರಹಿಸುವ ವಿಚಾರಗಳು ಅವರ ಮಾನಸಿಕತೆಯ ಬೆಳವಣಿಗೆಗೆ ಪೂರಕವಾಗಿರುತ್ತದೆ. ನೀವು ಧಾರವಾಹಿಗಳನ್ನು ವೀಕ್ಷಿಸುವಾಗ ಅದರಲ್ಲಿ ಬರುವ ಸನ್ನಿವೇಶಗಳು ನಿಮ್ಮನ್ನು ಹಾಳು ಮಾಡುವುದರೊಂದಿಗೆ ನಿಮ್ಮ ಮನೆಯಲ್ಲಿನ ಪುಟಾಣಿಗಳ ಮೇಲೆ ಎಷ್ಟೊಂದು ಪರಿಣಾಮ ಬೀರಬಹುದೆಂದು ಎಂದಾದರೂ ಗ್ರಹಿಸಿದ್ದೀರಾ? ಧಾರವಾಹಿಗಳಲ್ಲಿ ಬರುವ ಅಕ್ರಮ ಸಂಬಂಧಗಳು, ಅತ್ತೆ ಸೊಸೆಯ ಮೇಲೆ ಹೂಡುವ ಷಡ್ಯಂತ್ರ, ಸೊಸೆ ಅತ್ತೆಯ ಮೇಲೆ ಹೂಡುವ ಷಡ್ಯಂತ, ನಾದಿನಿ, ಮೈದುನಾ ತೋರುವ ಕ್ರೂರತನ ಹೀಗೆ ಎಲ್ಲ ಸಂಬಂಧಗಳು ಕ್ರೂರವಾಗಿರುತ್ತದೆ. ಯಾರನ್ನು ನಂಬಬಾರದು ಎಂಬ ಸನ್ನಿವೇಶವನ್ನು ಆ ಪುಟಾಣಿಗಳ ಮನ ಮಸ್ತಿಷ್ಕದಲ್ಲಿ ನಮಗರಿವಿಲ್ಲದೇ ಧಾರವಾಹಿಗಳು ತುಂಬಿಸಿ ಮರೆಯಾಗುತ್ತವೆ.

ಸಂಬಂಧಗಳ ಕೆಡುವಿಕೆಯೊಂದಿಗೆ ಮನೆಗಳಲ್ಲಿ ಮೂಢನಂಬಿಕೆಗಳನ್ನು ಕೂಡ ಹೆಚ್ಚಿಸುವಲ್ಲಿ ಇದರ ಪಾತ್ರ ಬಹುಮುಖ್ಯ. ಸೊಸೆಯ ಮೈ ಮೇಲೆ ದೆವ್ವ ಬಂದಿದೆಯೆಂದೋ, ಅಥವಾ ವಶೀಕರಣ ಇತ್ಯಾಧಿಗಳ ಹೆಸರಿನಲ್ಲಿ ನಮ್ಮನ್ನು ಮೂಢನಂಬಿಕೆಗಳಿಗೆ ಅಧೀನರನ್ನಾಗಿಸುತ್ತಿರುವುದು ಕೂಡ ಸತ್ಯ!

ಧಾರವಾಹಿಗಳು ಮಾದಕ ದ್ರವ್ಯಗಳಿಗಿಂತ ಡೆಂಜರ್! ಇಲ್ಲಿ ಸಿಗುವ ಅಫೀಮುಗಳು ಸಂಬಂಧಗಳನ್ನು ನುಚ್ಚು ನೂರಾಗಿಸುತ್ತದೆ. ಮನೊರಂಜನೆಯ ಹೆಸರಿನಲ್ಲಿ ಮನೆ ಪ್ರವೇಶಿಸುವ ಧಾರವಾಹಿಗಳು ವಿವಿಧ ರೀತಿಯಲ್ಲಿ ಮನೆಯ ಸಂಬಂಧಗಳನ್ನು ಅಲುಗಾಡಿಸಿ ಮನೆ ತೊರೆಯುತ್ತದೆ. ಮುಖ್ಯವಾಗಿ ಹದಿ ಹರೆಯದ ಯುವಕ-ಯುವತಿಯರಲ್ಲಿ ತಲ್ಲಣ ಉಂಟು ಮಾಡುವ ಕೆಲವು ಧಾರವಾಹಿಗಳು ಕಾಲ್ಪನಿಕ ಲೋಕದಲ್ಲಿ ತೇಲಾಡಿಸಿ ಅದೇ ಜೀವನ ಎನ್ನುವಷ್ಟರ ಮಟ್ಟಿಗೆ ನಮ್ಮನ್ನು ಮೋಸಗೊಳಿಸಿ ಬಿಡುತ್ತದೆ. ಮುಖ್ಯವಾಗಿ ಆಸೆಯನ್ನು ಹುಟ್ಟು ಹಾಕುವಲ್ಲಿ ಹಾಗೂ ಅತ್ಯಂತ ಆಯಿಶಾರಮದ ಜೀವನ ಕಲ್ಪಿಸಿಕೊಳ್ಳಲು, ನಮ್ಮನ್ನು ಸ್ವಾರ್ಥಿಯನ್ನಾಗಿಸಲು ಈ ಧಾರವಾಹಿಗಳು ಬಹಳಷ್ಟು ಹೆಣಗಾಡುತ್ತದೆ. ಅಷ್ಟೇ ಅಲ್ಲ ಮಹಲುಗಳ ಕಲ್ಪನೆ, ಚಿನ್ನ ಆಭರಣಗಳ ಕಲ್ಪನೆ ಹೀಗೆ ಅಸಾಧ್ಯವಾದ ಕನಸುಗಳನ್ನು ಪದೇ ಪದೇ ಮೂಡಿಸಿ ನಮ್ಮ ಜೀವನವನ್ನು ಅವಮಾನಿಸುತ್ತಿರುತ್ತದೆ!

ಪ್ರತೀ ಧಾರವಾಹಿಯಲ್ಲೂ ಮನೆಯ ಸನ್ನಿವೇಶಗಳು ಸಾಮಾನ್ಯವಾಗಿರುತ್ತದೆ. ಆದರೆ ನಿಜ ಜೀವನದಲ್ಲಿ ಎಷ್ಟೇ ಶ್ರೀಮಂತರಾಗಿದ್ದರೂ ಸಾಮಾನ್ಯ ಬಟ್ಟೆ ಉಡುವುದು ವಾಡಿಕೆ. ಆದರೆ ಧಾರವಾಹಿಗಳಲ್ಲಿ ಮನೆಯ ಸನ್ನಿವೇಶಗಳಲ್ಲೂ ಅತ್ಯಂತ ದುಬಾರಿ ಬಟ್ಟೆಗಳನ್ನು ಬಳಸಲಾಗುತ್ತದೆ. ಎಲ್ಲಿಯವರೆಗೆಂದರೆ ಮಲಗಲು ಹೋಗುವಾಗಳು ದುಬಾರಿ ಸೀರೆ ಉಟ್ಟು ಮಲಗುವ ಪಾತ್ರಧಾರಿಗಳು! ಇದೆಲ್ಲವೂ ಕೂಡ ಓದುಗರಿಗೆ ಸಾಮಾನ್ಯವಾಗಿ ಕಾಣಬಹುದು ಆದರೆ ಪ್ರತಿಯೊಂದು ಸನ್ನಿವೇಶವು ನೋಡುಗನ ಮನಸ್ಥಿತಿಯನ್ನು ಮತ್ತೆ ಮತ್ತೆ ಚಂಚಲಗೊಳಿಸುತ್ತದೆ.

ಹೀಗೆ ಪ್ರತಿ ಪಾತ್ರದಲ್ಲೂ ನಮಗರಿವಿಲ್ಲದಂತೆ ನಮ್ಮನ್ನು ಕಲ್ಪಿಸಿಕೊಳ್ಳುತ್ತಾ, ನಮಗರಿವಿಲ್ಲದೆಯೇ ನಮ್ಮ ಕೈಯಾರೇ ಈ ಧಾರವಾಹಿಗಳ ಮುಖಾಂತರ ಅಮೂಲ್ಯವಾದ ಕೌಟುಂಬಿಕ ಸಂಬಂಧಗಳಲ್ಲಿ ಸ್ವತಃ ನಾವೇ ಹುಳಿ ಹಿಂಡಲು ಪ್ರಯತ್ನಿಸುತ್ತಿರುವುದು ನಗ್ನ ಸತ್ಯ!

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.